Friday, June 5, 2026
spot_imgspot_img
spot_imgspot_img

ಮುಖ್ಯಮಂತ್ರಿ ಹಣಕಾಸು ಸಲಹೆಗಾರರಾಗಿ ನಿವೃತ್ತ ಐಎಎಸ್ ಎಲ್.ಕೆ.ಅತೀಕ್ ನೇಮಕ

- Advertisement -
- Advertisement -

ಎಸಿಎಸ್ ಆಗಿ ತುಷಾರ್ ಗಿರಿನಾಥ್ , ಕಾರ್ಯದರ್ಶಿಯಾಗಿ ರಾಜೇಂದ್ರ ಚೋಳನ್

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್, ಪಿ.ರಾಜೇಂದ್ರ ಚೋಳನ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಿ ಆದೇಶಿಸಲಾಗಿದೆ. ಅತ್ತ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಇತ್ತ ಮೂವರು ಅಧಿಕಾರಿಗಳಿಗೂ ಆಯಕಟ್ಟಿನ ಸ್ಥಳಗಳಿಗೆ ನಿಯುಕ್ತಿಗೊಳಿಸಲಾಗಿದೆ.

ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಎಲ್.ಕೆ. ಅತೀಕ್ ಅವರನ್ನು ಇದೀಗ ಡಿ.ಕೆ. ಶಿವಕುಮಾರ್ ಅವರು ತಮ್ಮ ಹಣಕಾಸು ಸಲಹೆಗಾರರಾಗಿ ನೇಮಿಸಿಕೊಂಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸಮಾನವಾದ ವೇತನ ಮತ್ತಿತರ ಭತ್ಯೆ ನೀಡಬೇಕೆಂದೂ ಆದೇಶಿಸಲಾಗಿದೆ. ಜತೆಗೆ ಬೆಂಗಳೂರು ಬಿಸಿನೆಸ್ ಕಾರಿಡಾರ್‌ನ ಅಧ್ಯಕ್ಷರಾಗಿಯೂ ಅತೀಕ್ ಅವರು ಮುಂದುವರಿಯಲಿದ್ದಾರೆ.

ಅದೇ ರೀತಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಎಸಿಎಸ್)ಯಾಗಿದ್ದ ತುಷಾರ್ ಗಿರಿನಾಥ್ ಅವರನ್ನು ಸಿಎಂ ಎಸಿಎಸ್ ಆಗಿ ವರ್ಗಾವಣೆ ಮಾಡಿದ್ದು, ನಗರಾಭಿವೃದ್ಧಿ ಇಲಾಖೆಯ ಪ್ರಭಾರ ಎಸಿಎಸ್ ಆಗಿಯೂ ಮುಂದುವರಿಸಿದೆ. ಸಿಎಂ ಎಸಿಎಸ್ ಆಗಿದ್ದ ಅಂಜುಂ ಪರ್ವೇಜ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ಅಂತೆಯೇ ಶಿವಕುಮಾರ್ ಅವರು ಡಿಸಿಎಂ ಇದ್ದಾಗ ಕಾರ್ಯದರ್ಶಿಯಾಗಿದ್ದ ಪಿ.ರಾಜೇಂದ್ರ ಚೋಳನ್ ಅವರಿಗೆ ಸಿಎಂ ಕಾರ್ಯದರ್ಶಿ ಹುದ್ದೆ ದಕ್ಕಿದ್ದು, ಕರ್ನಾಟಕ ವಿದ್ಯುತ್ ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಮುಂದುವರಿಯಲಿದ್ದಾರೆ. ಸಿಎಂ ಕಾರ್ಯದರ್ಶಿ ಆಗಿದ್ದ ಬಿ.ಬಿ. ಕಾವೇರಿ ಅವರನ್ನು ವರ್ಗಾವಣೆ ಮಾಡಲಾಗಿದೆ.

- Advertisement -

Related news

error: Content is protected !!