




ಬ್ರಹ್ಮಾವರ: ಮರದಿಂದ ಬಿದ್ದ ತೆಂಗಿನಕಾಯಿ ತಲೆಗೆ ಬಡಿದ ಪರಿಣಾಮ ಒಂದೂವರೆ ವರ್ಷದ ಬಾಲಕ ಮೃತಪಟ್ಟ ಘಟನೆ ಬ್ರಹ್ಮಾವರ ಸಮೀಪ ಹೆರಂಜೆಯಲ್ಲಿ ಸಂಭವಿಸಿದೆ.
ಮೃತ ಬಾಲಕನನ್ನು ದಕ್ಷ್ ಪೂಜಾರಿ ಎಂದು ಗುರುತಿಸಲಾಗಿದೆ. ಬಾಲಕನ ತಂದೆ ಪ್ರಶಾಂತ್ ಪೂಜಾರಿ ಅವರು ಕಳೆದ ಸುಮಾರು 13 ವರ್ಷಗಳಿಂದ ಬ್ರಹ್ಮಾವರ ಗಾಂಧಿ ಮೈದಾನದ ಸಮೀಪ ಸಣ್ಣ ಗಾಡಿಯಲ್ಲಿ ಫಾಸ್ಟ್ ಫುಡ್ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದರು.
ಮಂಗಳವಾರ ಬೆಳಿಗ್ಗೆ ಸುಮಾರು 8.15 ಗಂಟೆಯ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಮಗಳು ದಿಯಾಳನ್ನು ಶಾಲಾ ಬಸ್ಸಿಗೆ ಕಳುಹಿಸಲು ತಾಯಿ ಸುಚಿತ್ರ ಪೂಜಾರಿ ಅವರು ಮಗ ದಕ್ಷ್ ನನ್ನು ಕರೆದುಕೊಂಡು ಮನೆಯಿಂದ ಹೊರಟಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿದ್ದ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ತೆಂಗಿನಕಾಯಿ ಕೆಳಗೆ ಬಿದ್ದು ದಕ್ಷ್ ನ ತಲೆಗೆ ಬಡಿದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಮೆದುಳಿಗೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








