Thursday, June 11, 2026
spot_imgspot_img
spot_imgspot_img

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಮೃತ ಹಾಗೂ ಅನರ್ಹ ಫಲಾನುಭವಿಗಳ ಪತ್ತೆಗೆ ಸರ್ಕಾರದ ಕ್ರಮ-ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ; ಪರಿಶೀಲನೆ ಮಾಡಿಸದಿದ್ದರೆ ಸ್ಥಗಿತವಾಗಬಹುದು ₹2,000 ನೆರವು

- Advertisement -
- Advertisement -

ಬೆಂಗಳೂರು, ಜೂನ್ 11: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಮತ್ತಷ್ಟು ಪಾರದರ್ಶಕಗೊಳಿಸುವ ಉದ್ದೇಶದಿಂದ ಫಲಾನುಭವಿಗಳ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ತೀವ್ರಗೊಳಿಸಿದೆ. ಯೋಜನೆಯ ಸೌಲಭ್ಯವು ನಿಜವಾದ ಅರ್ಹರಿಗೆ ತಲುಪುವಂತೆ ಮಾಡಲು ಮೃತ ಹಾಗೂ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯದವರೆಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದ ಸುಮಾರು 1,95,224 ಮಂದಿ ಮೃತಪಟ್ಟಿರುವುದು ಪತ್ತೆಯಾಗಿದೆ. ಆದಾಗ್ಯೂ, ಹಲವು ಪ್ರಕರಣಗಳಲ್ಲಿ ಅವರ ಹೆಸರಿನಲ್ಲೇ ಬ್ಯಾಂಕ್ ಖಾತೆಗಳಿಗೆ ಯೋಜನೆಯ ಹಣ ಜಮೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದೇ ವೇಳೆ, ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ಯೋಜನೆಗೆ ಅನರ್ಹರಾಗಿರುವ ಕೆಲವರೂ ಫಲಾನುಭವಿಗಳ ಪಟ್ಟಿಯಲ್ಲಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, ಅನರ್ಹರಿಗೆ ಯೋಜನೆಯ ಸೌಲಭ್ಯ ಸಿಗುವುದನ್ನು ತಡೆಯಲು ಸರ್ಕಾರ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸುವ ಕ್ರಮಕ್ಕೆ ಮುಂದಾಗಿದೆ. ಫಲಾನುಭವಿಗಳು ತಮ್ಮ ಗುರುತನ್ನು ದೃಢೀಕರಿಸದಿದ್ದರೆ, ಅವರ ಖಾತೆಗಳಿಗೆ ಜಮೆಯಾಗುವ ₹2,000 ಮಾಸಿಕ ನೆರವು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಯೋಮೆಟ್ರಿಕ್ ದೃಢೀಕರಣವನ್ನು ಬೆಂಗಳೂರು ಒನ್, ಗ್ರಾಮ ಒನ್, ಸೇವಾ ಕೇಂದ್ರ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದಾಗಿದೆ.

ಇದಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಜೊತೆಗೆ, ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿದೆಯೇ ಹಾಗೂ ಯೋಜನೆಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯೇ ಎಂಬುದನ್ನು ಫಲಾನುಭವಿಗಳು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.ಇದೀಗ ಸರ್ಕಾರದ ಈ ಕ್ರಮಕ್ಕೆ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದು, ನಿಜವಾದ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿವೆ.

ಮತ್ತೊಂದೆಡೆ, ಸಾರ್ವಜನಿಕ ಹಣದ ದುರುಪಯೋಗ ತಡೆಗಟ್ಟಲು ಮತ್ತು ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಈ ಕ್ರಮ ಅಗತ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಲಕ್ಷಾಂತರ ಮಹಿಳೆಯರು ಪ್ರತಿ ತಿಂಗಳು ₹2,000 ನೆರವು ಪಡೆಯುತ್ತಿದ್ದು, ಯೋಜನೆಯ ಪರಿಣಾಮಕಾರಿ ಜಾರಿಗೆ ಸರ್ಕಾರ ಇದೀಗ ಫಲಾನುಭವಿಗಳ ಮಾಹಿತಿಯ ಮರುಪರಿಶೀಲನೆಗೆ ಆದ್ಯತೆ ನೀಡಿದೆ.

- Advertisement -

Related news

error: Content is protected !!