Friday, June 12, 2026
spot_imgspot_img
spot_imgspot_img

ರೋಹಿಣಿ ಸಿಂಧೂರಿ–ರೂಪಾ ಮೌದ್ಗಿಲ್ ಮಾನನಷ್ಟ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆಮಧ್ಯಸ್ಥಿಕೆಗೆ ನಿವೃತ್ತ ನ್ಯಾ. ಕುರಿಯನ್ ಜೋಸೆಫ್ ರನ್ನು ನೇಮಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

ಹೊಸದಿಲ್ಲಿ: ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವಿನ ದೀರ್ಘಕಾಲದ ಮಾನನಷ್ಟ ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನು ಮಧ್ಯವರ್ತಿಯಾಗಿ ನೇಮಿಸಲಾಗಿದೆ.ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್ದೇವ ಅವರಿದ್ದ ಪೀಠವು, ಸುದೀರ್ಘ ನ್ಯಾಯಾಂಗ ಹೋರಾಟದ ಬದಲು ಮಧ್ಯಸ್ಥಿಕೆಯ ಮೂಲಕ ವಿವಾದ ಇತ್ಯರ್ಥವಾಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.

ಇಬ್ಬರೂ ಪರಸ್ಪರರ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ನ್ಯಾಯಮೂರ್ತಿ ಶರ್ಮಾ ವಿಚಾರಣೆ ವೇಳೆ ಹೇಳಿದರು. ‘ಈ ಪ್ರಕರಣವನ್ನು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನು ಮಧ್ಯವರ್ತಿಯಾಗಿ ನೇಮಿಸಲಾಗಿದೆ. ಕಕ್ಷಿದಾರರು ಅವರ ಮುಂದೆ ಹಾಜರಾಗಬೇಕು. ಮಧ್ಯಂತರ ಕ್ರಮವಾಗಿ ಎರಡೂ ಪ್ರಕರಣಗಳ ಮುಂದಿನ ವಿಚಾರಣೆಗೆ ತಡೆ ನೀಡಲಾಗಿದೆ’ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.2023ರಲ್ಲಿ ಇಬ್ಬರು ಅಧಿಕಾರಿಗಳು ಪರಸ್ಪರರ ವಿರುದ್ಧ ಸಾರ್ವಜನಿಕವಾಗಿ ಆರೋಪ–ಪ್ರತ್ಯಾರೋಪಗಳನ್ನು ಮಾಡಿದ ಬಳಿಕ ಈ ವಿವಾದ ಆರಂಭವಾಗಿತ್ತು. ಬಳಿಕ ಇಬ್ಬರೂ ಪರಸ್ಪರ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದ್ದರು.ರೂಪಾ ಮೌದ್ಗಿಲ್ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಮೌದ್ಗಿಲ್ ಅವರ ದೂರಿನ ಮೇರೆಗೆ ವಿಚಾರಣಾ ನ್ಯಾಯಾಲಯ ಕೈಗೊಂಡ ಕ್ರಮದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಸಿಂಧೂರಿ ಅವರು ಸದ್ಭಾವನೆಯ ಆಧಾರದ ಮೇಲೆ ಹೇಳಿಕೆ ನೀಡಿದ್ದರು ಎಂಬ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿತ್ತು. ಸಾರ್ವಜನಿಕ ಹಿತದೃಷ್ಟಿಯಿಂದ ಹೇಳಿಕೆ ನೀಡಲಾಗಿದೆಯೇ ಎಂಬುದು ವಿಚಾರಣೆಯ ವೇಳೆ ಸಾಕ್ಷ್ಯಾಧಾರಗಳ ಆಧಾರದಲ್ಲಿ ನಿರ್ಧರಿಸಬೇಕಾದ ವಿಷಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.►

ವಿವಾದದ ಹಿನ್ನೆಲೆ2023ರ ಫೆಬ್ರುವರಿ 18ರಂದು ರೂಪಾ ಮೌದ್ಗಿಲ್ ಅವರು ಫೇಸ್ಬುಕ್ ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಜಾಲಹಳ್ಳಿಯಲ್ಲಿರುವ ಬಂಗಲೆಯನ್ನು ಆಸ್ತಿ ವಿವರಗಳಲ್ಲಿ ಬಹಿರಂಗಪಡಿಸಿಲ್ಲ ಎಂದು ಅವರು ಆರೋಪಿಸಿದ್ದರು. ಇದಾದ ಬಳಿಕ, ತನ್ನ ವಿರುದ್ಧ ಸುಳ್ಳು ಮತ್ತು ಮಾನನಷ್ಟಕರ ಹೇಳಿಕೆಗಳನ್ನು ನೀಡದಂತೆ ಕೋರಿ ಸಿಂಧೂರಿ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500ರ ಅಡಿಯಲ್ಲಿ ಖಾಸಗಿ ಕ್ರಿಮಿನಲ್ ದೂರನ್ನೂ ದಾಖಲಿಸಿದ್ದರು.ಈ ಪ್ರಕರಣಗಳನ್ನು ಪ್ರಶ್ನಿಸಿ ರೂಪಾ ಮೌದ್ಗಿಲ್ ಹೈಕೋರ್ಟ್ ಹಾಗೂ ಬಳಿಕ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು. ಆ ವೇಳೆ ರಾಜಿ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿದ್ದ ಮಾನನಷ್ಟಕರ ಪೋಸ್ಟ್ಗಳನ್ನು ಅಳಿಸುವಂತೆ ಮೌದ್ಗಿಲ್ ಅವರಿಗೆ ನಿರ್ದೇಶಿಸಿತ್ತು. ಬಳಿಕ ಪೋಸ್ಟ್ಗಳನ್ನು ಅಳಿಸಲಾಗಿತ್ತು.

ಆದರೆ, 2024ರ ಡಿಸೆಂಬರ್ 9ರಂದು ಮೌದ್ಗಿಲ್ ಹೊಸ ದೂರು ದಾಖಲಿಸಿ, ಸಿಂಧೂರಿ ಅವರು ತಮ್ಮನ್ನು ಮಾನಸಿಕವಾಗಿ ಅಸ್ವಸ್ಥರೆಂದು ಬಿಂಬಿಸುವ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು.

ಈ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ಪ್ರಕರಣ ದಾಖಲಿಸಿಕೊಂಡು ಸಿಂಧೂರಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು.ಈ ಕ್ರಮವನ್ನು ಪ್ರಶ್ನಿಸಿ ಸಿಂಧೂರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿದ್ದರು.

- Advertisement -

Related news

error: Content is protected !!