
ಹಾವೇರಿ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಜೀವಂತವಾಗಿರುವ ಮಹಿಳೆಯನ್ನೇ ದಾಖಲೆಗಳಲ್ಲಿ ಮೃತರೆಂದು ದಾಖಲಿಸಿ ಮರಣ ಪ್ರಮಾಣ ಪತ್ರ ನೀಡಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಈ ಎಡವಟ್ಟಿನಿಂದ ಮಹಿಳೆಯ ಬ್ಯಾಂಕ್ ಖಾತೆ ಸ್ಥಗಿತಗೊಂಡಿದ್ದು, ಪಿಂಚಣಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳು ಬಂದ್ ಆಗಿರುವ ಪರಿಣಾಮ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.ಅತ್ತಿಗೇರಿ ಗ್ರಾಮದ ಶಿವಗಂಗವ್ವ ತಳಳ್ಳಿ (55) ಅವರ ಹೆಸರಿನಲ್ಲೇ ತಪ್ಪಾಗಿ ಮರಣ ಪ್ರಮಾಣ ಪತ್ರ ಸೃಷ್ಟಿಯಾಗಿರುವುದು ಪ್ರಕರಣದ ಕೇಂದ್ರಬಿಂದುವಾಗಿದೆ.
ವಾಸ್ತವವಾಗಿ ಶಿವಗಂಗವ್ವ ಅವರ ತಾಯಿ ಶಂಕ್ರವ್ವ ಚಿಕ್ಕಪ್ಪ ಮಿಳ್ಳಿಯವರ (98) ಮರಣ ನೋಂದಣಿಗಾಗಿ ಕುಟುಂಬಸ್ಥರು ಗ್ರಾಮ ಪಂಚಾಯತ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳ ಎಡವಟ್ಟಿನಿಂದ ಮೃತ ತಾಯಿಯ ಬದಲಿಗೆ ಜೀವಂತವಾಗಿರುವ ಮಗಳ ಹೆಸರಿನಲ್ಲೇ ಮರಣ ಪ್ರಮಾಣ ಪತ್ರ ಸೃಷ್ಟಿಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಘಟನೆಯ ಹಿನ್ನೆಲೆಶಿವಗಂಗವ್ವ ಅವರ ಪುತ್ರ ಬಸವರಾಜ್ ತಳಳ್ಳಿ ನೀಡಿದ ಮಾಹಿತಿಯಂತೆ, 2025ರ ಮಾರ್ಚ್ 15ರಂದು ಶಂಕ್ರವ್ವ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದರು. ನಂತರ ಮರಣ ಪ್ರಮಾಣ ಪತ್ರ ಪಡೆಯಲು ಗ್ರಾಮ ಪಂಚಾಯತ್ಗೆ ಅರ್ಜಿ ಸಲ್ಲಿಸುವ ವೇಳೆ ವಾರಸುದಾರರ ಆಧಾರ್ ಕಾರ್ಡ್ ಪ್ರತಿಯನ್ನು ಅಧಿಕಾರಿಗಳು ಕೇಳಿದ್ದರು. ಇದಕ್ಕೆ ಶಿವಗಂಗವ್ವ ಅವರ ಆಧಾರ್ ಕಾರ್ಡ್ ಪ್ರತಿಯನ್ನು ನೀಡಲಾಗಿತ್ತು.ದಾಖಲೆಗಳನ್ನು ಸ್ವೀಕರಿಸಿದ ಪಂಚಾಯತ್ ಸಿಬ್ಬಂದಿ ಆನ್ಲೈನ್ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು.
ಆದರೆ ಬಳಿಕ ಬಂದ ಮರಣ ಪ್ರಮಾಣ ಪತ್ರದಲ್ಲಿ ಶಂಕ್ರವ್ವ ಅವರ ಹೆಸರಿನ ಬದಲಿಗೆ ಶಿವಗಂಗವ್ವ ಅವರ ಹೆಸರೇ ದಾಖಲಾಗಿರುವುದು ಕುಟುಂಬದ ಗಮನಕ್ಕೆ ಬಂದಿದೆ. ಈ ವಿಷಯವನ್ನು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದಾಗ, ಅವರು ತಪ್ಪು ಪ್ರಮಾಣ ಪತ್ರವನ್ನು ಹರಿದು ಹಾಕಿ ಶಂಕ್ರವ್ವ ಅವರ ಹೆಸರಿನ ಹೊಸ ಮರಣ ಪ್ರಮಾಣ ಪತ್ರ ನೀಡಿದ್ದರು.ಬಳಿಕ ಆರಂಭವಾದ ಸಂಕಷ್ಟಆದರೆ ತಪ್ಪಿನ ನಿಜವಾದ ಪರಿಣಾಮ ಕೆಲವು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಶಿವಗಂಗವ್ವ ಅವರು ಮಾಸಿಕ ಪಿಂಚಣಿ ಪಡೆಯಲು ಹೂಲಗೂರಿನ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ತೆರಳಿದಾಗ, “ಖಾತೆದಾರರು ಮೃತಪಟ್ಟಿದ್ದಾರೆ ಎಂದು ದಾಖಲೆಗಳಲ್ಲಿ ಇದೆ. ಖಾತೆ ಸ್ಥಗಿತಗೊಳಿಸಲಾಗಿದೆ” ಎಂದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆಯ ನಂತರ ಕುಟುಂಬಸ್ಥರು ಮತ್ತೆ ಪಂಚಾಯತ್ ಕಚೇರಿಗೆ ತೆರಳಿ ಸಮಸ್ಯೆ ವಿವರಿಸಿದರೂ, ಅಧಿಕಾರಿಗಳು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದೆ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.ಸೌಲಭ್ಯಗಳೆಲ್ಲ ಸ್ಥಗಿತತಪ್ಪು ಮರಣ ದಾಖಲೆಯ ಪರಿಣಾಮವಾಗಿ ಶಿವಗಂಗವ್ವ ಅವರಿಗೆ ದೊರೆಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ನಿಂತಿದ್ದು, ಅನ್ನಭಾಗ್ಯ ಯೋಜನೆಯ ರೇಷನ್ ವಿತರಣೆಯೂ ಸ್ಥಗಿತಗೊಂಡಿದೆ. ಹಲವು ಬಾರಿ ಪಂಚಾಯತ್ ಕಚೇರಿಗೆ ತೆರಳಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ.
“ನಮ್ಮ ತಾಯಿ ಇದ್ದೂ ಸತ್ತಂತಾಗಿದ್ದಾರೆ”
ಶಿವಗಂಗವ್ವ ಅವರ ಪುತ್ರಿ ರೇಣುಕಾ ಹುಬ್ಬಳ್ಳಿ ಮಾತನಾಡಿ, “ನಮ್ಮ ಮನೆಯಲ್ಲಿ ಯಾರೂ ಹೆಚ್ಚು ವಿದ್ಯಾವಂತರಲ್ಲ. ಅಧಿಕಾರಿಗಳ ತಪ್ಪಿನಿಂದ ನಮ್ಮ ತಾಯಿ ಇದ್ದೂ ಸತ್ತಂತಾಗಿದ್ದಾರೆ. ಬಡವರಿಗೆ ನ್ಯಾಯ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮಂತೆ ಮತ್ತಾರಿಗೂ ಅನ್ಯಾಯವಾಗಬಾರದು” ಎಂದು ಆಗ್ರಹಿಸಿದರು.“
ಸಾಲದ ಒತ್ತಡದಿಂದ ಬದುಕೇ ಬೇಸರವಾಗಿದೆ”
ಸಂತ್ರಸ್ತೆ ಶಿವಗಂಗವ್ವ ಮಾತನಾಡಿ, “ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನನ್ನ ಆಧಾರ್ ಮತ್ತು ದಾಖಲೆಗಳಲ್ಲಿ ಸಮಸ್ಯೆ ಉಂಟಾಗಿದೆ. ಪಿಂಚಣಿ ಹಣ ನಿಂತಿದೆ. ಸಮಸ್ಯೆ ಪರಿಹಾರಕ್ಕಾಗಿ ಎರಡು ಬಾರಿ ಬೆಂಗಳೂರಿಗೆ ತೆರಳಿ ದಾಖಲೆ ತಿದ್ದುಪಡಿ ಮಾಡಿಸಿಕೊಂಡಿದ್ದೇನೆ. ಆದರೆ ಮತ್ತೆ ಮತ್ತೆ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಪ್ರತಿ ಬಾರಿ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಸಾಲದ ಒತ್ತಡ ಹೆಚ್ಚಾಗಿದ್ದು, ಜೀವನವೇ ಸಂಕಷ್ಟಕ್ಕೆ ಸಿಲುಕಿದೆ” ಎಂದು ಕಣ್ಣೀರಿಟ್ಟರು.
ತಪ್ಪಿತಸ್ಥರ ವಿರುದ್ಧ ಕ್ರಮ: ಶಾಸಕ ಭರವಸೆ
ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಶಿಗ್ಗಾಂವಿ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್, “ಇದು ಉದ್ದೇಶಪೂರ್ವಕವಾಗಿ ನಡೆದಿದೆಯೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿದೆಯೋ ಎಂಬುದನ್ನು ತನಿಖೆ ಮಾಡುತ್ತೇವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಶೀಘ್ರದಲ್ಲೇ ಶಿವಗಂಗವ್ವ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಜೊತೆಗೆ ಅವರಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ
ಒಬ್ಬ ಜೀವಂತ ಮಹಿಳೆಯನ್ನು ದಾಖಲೆಗಳಲ್ಲಿ ಮೃತರೆಂದು ಘೋಷಿಸಿರುವ ಈ ಘಟನೆ ಆಡಳಿತಾತ್ಮಕ ನಿರ್ಲಕ್ಷ್ಯದ ಗಂಭೀರ ಉದಾಹರಣೆಯಾಗಿ ಪರಿಣಮಿಸಿದೆ. ತಪ್ಪು ದಾಖಲೆಗಳಿಂದ ಬಡ ಕುಟುಂಬವೊಂದು ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಅಧಿಕಾರಿಗಳ ಒಂದು ಸಣ್ಣ ಎಡವಟ್ಟು ಬಡ ಕುಟುಂಬದ ಬದುಕನ್ನೇ ಸಂಕಷ್ಟಕ್ಕೆ ತಳ್ಳಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.








