Monday, June 22, 2026
spot_imgspot_img
spot_imgspot_img

ಪೊಲೀಸ್ ಮನೆಗೆ ಕನ್ನಹಾಕಿದ ಕಳ್ಳರು : ಎಂಟು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

- Advertisement -
- Advertisement -

ಚಿಕ್ಕಮಗಳೂರು: ಪೊಲೀಸ್ ಮನೆಗೆ ಕನ್ನ ಹಾಕಿದ ಕಳ್ಳರು ಸುಮಾರು ಎಂಟು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ರಾಮನಹಳ್ಳಿಯ ಪೊಲೀಸ್‌ ವಸತಿಗೃಹದಲ್ಲಿ ನಡೆದಿದೆ.

ಈ ಬಗ್ಗೆ ಚಿಕ್ಕಮಗಳೂರು ಡಿವೈಎಸ್ಪಿ ಕಚೇರಿಯ ಸಿಬ್ಬಂದಿ ಅಣ್ಣಪ್ಪ ಎಂಬವರ ಪತ್ನಿ ಬಿ.ಎಂ. ಬಿಂದೂ ಈ ಬಗ್ಗೆ ದೂರು ನೀಡಿದ್ದಾರೆ.

ಜೂನ್ 15ರಂದು ಮಗನ ಹುಟ್ಟುಹಬ್ಬದ ದಿನ ಬಿಂದೂ ಪಕ್ಕದ ಮನೆಯವರೊಂದಿಗೆ ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನಕ್ಕೆ ಹೋಗಲು ನಿರ್ಧರಿಸಿ, ಪತಿ ಕಚೇರಿಯಿಂದ ಬಂದರೆ ಅನುಕೂಲವಾಗಲಿ ಎಂದು ಕೀಯನ್ನು ಮನೆಯ ಮುಂಭಾಗದ ಶೂ ಒಳಗೆ ಬಚ್ಚಿಟ್ಟು ಹೋಗಿದ್ದರು. ಮಧ್ಯಾಹ್ನ ವಾಪಸ್ ಬಂದು ನೋಡಿದಾಗ ಕಳ್ಳತನದ ಯಾವುದೇ ಲಕ್ಷಣಗಳು ತಕ್ಷಣಕ್ಕೆ ಮೇಲ್ನೋಟಕ್ಕೆ ಕಂಡುಬಂದಿರಲಿಲ್ಲ. ಸಂಜೆ ಮಗನಿಗೆ ಬರ್ತಡೇ ಕೇಕ್ ಕತ್ತರಿಸುವಾಗ ಒಡವೆ ಧರಿಸಲು ಬೀರು ಪರಿಶೀಲಿಸಿದಾಗ ಕಳ್ಳತನ ಬಯಲಾಗಿದೆ.

ಬೀರುವಿನ ಇಂಟರ್ ಲಾಕ್ ತೆರೆದು 24 ಗ್ರಾಂ ಚಿನ್ನದ ಬ್ರೇಸ್ಲಿಟ್, 21 ಗ್ರಾಂ ಚಿನ್ನದ ಸರ ಹಾಗೂ 3 ಗ್ರಾಂನ ಗಣೇಶ ಮೂರ್ತಿ ಪೆಂಡೆಂಟ್ ಸೇರಿ ಒಟ್ಟು 48 ಗ್ರಾಂನ 8 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿದೆ.

ಬೀಗದ ಕೀ ಇಟ್ಟಿದ್ದನ್ನು ಗಮನಿಸಿದವರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಬಸವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!