ಬೆಳ್ತಂಗಡಿ, ಜೂ.23: ಸೌಜನ್ಯ ನ್ಯಾಯಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಪ್ರಕರಣದ ವಿಚಾರಣೆ ವೇಳೆ ವ್ಯಕ್ತಿಗಳ ವಿರುದ್ಧ ಮಡ್ ಸ್ಲಾಗಿಂಗ್ ಹಾಗೂ ಅವಹೇಳನಕಾರಿ ವ್ಯಂಗ್ಯ ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಟೀಕೆ ಮತ್ತು ಪ್ರಶ್ನೆಗಳಿಗೆ ಅವಕಾಶವಿದೆ ಎಂದು ಸೂಚಿಸಿದೆ. ವ್ಯಕ್ತಿಗಳ ವಿರುದ್ಧ ಕಾನೂನುಬದ್ಧ ಹಾಗೂ ಆರೋಗ್ಯಕರ ಟೀಕೆಗಳಿಗೆ ಯಾವುದೇ ಅಭ್ಯಂತರವಿಲ್ಲ ಎಂಬುದನ್ನೂ ನ್ಯಾಯಾಲಯ ಸ್ಪಷ್ಟಪಡಿಸಿದೆ.ನ್ಯಾಯಾಲಯದ ಸೂಚನೆಗೆ ಗೌರವ ಸೂಚಿಸಿರುವ ಗಿರೀಶ್ ಮಟ್ಟಣ್ಣವರ್, ತಾವು ಸಲ್ಲಿಸಿದ ಸ್ವಯಂಪ್ರೇರಿತ ಪ್ರಮಾಣಪತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಾಗಿದ್ದು, ಕ್ಷೇತ್ರದ ಕುರಿತು ಅಪಾರ ನಂಬಿಕೆ ಮತ್ತು ಭಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಇದುವರೆಗೆ ದೇವಸ್ಥಾನ ಅಥವಾ ಕ್ಷೇತ್ರದ ವಿರುದ್ಧ ಯಾವುದೇ ಅಪಚಾರ ಮಾಡಿಲ್ಲ ಎಂದು ಹೇಳಿರುವ ಅವರು, ತಮ್ಮ ಹೋರಾಟ ಸೌಜನ್ಯ ಪ್ರಕರಣ ಸೇರಿದಂತೆ ಇತರ ಗಂಭೀರ ಪ್ರಕರಣಗಳಲ್ಲಿ ನ್ಯಾಯದ ಅನ್ವೇಷಣೆಗೆ ಸೀಮಿತವಾಗಿದ್ದು, ದೇವರು ಅಥವಾ ದೇವಸ್ಥಾನದ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇನ್ನು ಮುಂದೆಯೂ ಅತ್ಯಾಚಾರ, ಕೊಲೆ, ಕಾಣೆಯಾದ ಪ್ರಕರಣಗಳು ಹಾಗೂ ಶೋಷಣೆಗೆ ಒಳಗಾದ ಸಂತ್ರಸ್ತರ ಪರವಾಗಿ ಕಾನೂನುಬದ್ಧವಾಗಿ ಧ್ವನಿ ಎತ್ತುವುದಾಗಿ ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಅನ್ಯಾಯದ ವಿರುದ್ಧ ಧ್ವನಿ ಎತ್ತುವ ತಮ್ಮ ಸಂವಿಧಾನಬದ್ಧ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬ ವಿನಮ್ರ ಮನವಿಯನ್ನೂ ನ್ಯಾಯಾಲಯದ ಮುಂದೆ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಹೈಕೋರ್ಟ್, ಅರ್ಜಿದಾರರ ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಆರೋಗ್ಯಕರ ಟೀಕೆ ಮತ್ತು ಪ್ರಶ್ನೆಗಳಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇರಬೇಕು ಎಂದು ಮಹತ್ವದ ಸೂಚನೆ ನೀಡಿದೆ.
ಅರ್ಜಿದಾರರ ಪರವಾಗಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿ, ಗಿರೀಶ್ ಮಟ್ಟಣ್ಣವರ್ ಸೌಜನ್ಯ ನ್ಯಾಯಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕಾರಣ ಇಂತಹ ಆರೋಪಗಳು ಎದುರಾಗಿವೆ. ಅವರು ದೇವಸ್ಥಾನ ಅಥವಾ ದೇವರ ವಿರುದ್ಧ ಯಾವುದೇ ಅಪಚಾರ ಮಾಡಿಲ್ಲ ಹಾಗೂ ಸ್ವತಃ ಧರ್ಮಸ್ಥಳದ ಭಕ್ತರಾಗಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಜೊತೆಗೆ ನ್ಯಾಯಾಲಯದ ಆದೇಶಗಳನ್ನು ಗೌರವಪೂರ್ವಕವಾಗಿ ಪಾಲಿಸುವ ವ್ಯಕ್ತಿ ಎಂದು ವಾದಿಸಿದರು.ಪ್ರಕರಣದಲ್ಲಿ ವಕೀಲರಾದ ರಾಜವರ್ಧನ್ ರೆಡ್ಡಿ ಮತ್ತು ಗೌರವ್ ಕೂಡ ಅರ್ಜಿದಾರರ ಪರ ಹಾಜರಿದ್ದರು.








