Wednesday, June 24, 2026
spot_imgspot_img
spot_imgspot_img

ಇದು ನಾರ್ಮಲ್ ಸಾವಲ್ಲ – ಪ್ರೀ ವೆಡ್ಡಿಂಗ್ ಫೋಟೋಶೂಟ್ ಹೆಸರಲ್ಲಿ 400 ಅಡಿ ಕಂದಕಕ್ಕೆ ತಳ್ಳಿ ಹತ್ಯೆ; ಪೊಲೀಸ್ ತನಿಖೆಯಿಂದ ಬಯಲು – ಭಾವಿ ಪತ್ನಿ-ಪ್ರಿಯಕರ ಅರೆಸ್ಟ್

- Advertisement -
- Advertisement -

ಪುಣೆ: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ಜೂನ್ 18ರಂದು ನಡೆದಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರ ನಿಗೂಢ ಸಾವು ಇದೀಗ ಭೀಕರ ಕೊಲೆ ಪ್ರಕರಣವಾಗಿ ಬದಲಾಗಿದೆ. ಈ ಸಂಬಂಧ ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಜೂನ್ 19ರಂದು ಸಿಯಾ ಗೋಯಲ್ ಅವರ ಹುಟ್ಟುಹಬ್ಬವಿದ್ದ ಹಿನ್ನೆಲೆಯಲ್ಲಿ, ಅದರ ಮುನ್ನಾದಿನವಾದ ಜೂನ್ 18ರಂದು ಪ್ರಿ-ವೆಡ್ಡಿಂಗ್ ಫೋಟೋಶೂಟ್ ಹಾಗೂ ಹುಟ್ಟುಹಬ್ಬದ ಸಂಭ್ರಮದ ನೆಪದಲ್ಲಿ ಕೇತನ್ ಮತ್ತು ಸಿಯಾ ಲೋಹಗಢ ಕೋಟೆಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಬೆಳಿಗ್ಗೆ ಸುಮಾರು 10.30ರ ವೇಳೆಗೆ ಕೋಟೆಯ ತುದಿಯಲ್ಲಿ ಫೋಟೋ ತೆಗೆಯುವಾಗ ತೀವ್ರ ಗಾಳಿಗೆ ಕೇತನ್ ಆಯತಪ್ಪಿ ಸುಮಾರು 400 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಈ ಆಧಾರದ ಮೇಲೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು.ಆದರೆ ತನಿಖೆ ಮುಂದುವರಿದಂತೆ ಸಿಯಾ ನೀಡಿದ ಹೇಳಿಕೆಗಳಲ್ಲಿ ವೈರುಧ್ಯ ಕಂಡುಬಂದಿದ್ದು, ಆಕೆಯ ಮೊಬೈಲ್ ಕರೆಗಳ ವಿವರ, ಸಾಮಾಜಿಕ ಜಾಲತಾಣ ಚಟುವಟಿಕೆಗಳು ಹಾಗೂ ಇತರ ಡಿಜಿಟಲ್ ಪುರಾವೆಗಳನ್ನು ಪೊಲೀಸರು ಪರಿಶೀಲಿಸಿದರು.

ಈ ವೇಳೆ ಕೇತನ್‌ನ ಸಾವು ಅಪಘಾತವಲ್ಲ, ಪೂರ್ವಯೋಜಿತ ಕೊಲೆ ಎಂಬ ಸಂಗತಿ ಬೆಳಕಿಗೆ ಬಂದಿದೆ.ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಿಯಾ ಗೋಯಲ್‌ಗೆ ಕುಟುಂಬಸ್ಥರು ನಿಶ್ಚಯಿಸಿದ್ದ ಕೇತನ್ ಜೊತೆ ವಿವಾಹವಾಗಲು ಇಷ್ಟವಿರಲಿಲ್ಲ. ತಾನು ಪ್ರೀತಿಸುತ್ತಿದ್ದ ಚೇತನ್ ಚೌಧರಿ ಜೊತೆ ಜೀವನ ಸಾಗಿಸಲು ಬಯಸಿದ್ದ ಸಿಯಾ, ಕೇತನ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಆತನನ್ನು ಕೊಲ್ಲುವ ಸಂಚು ರೂಪಿಸಿದ್ದಳು.

ಜೂನ್ 18ರಂದು ಕೋಟೆಯ ತುದಿಗೆ ಬಂದ ಬಳಿಕ ತನ್ನ ಪ್ರಿಯಕರ ಚೇತನ್‌ನನ್ನು ರಹಸ್ಯವಾಗಿ ಅಲ್ಲಿಗೆ ಕರೆಸಿಕೊಂಡಿದ್ದಳು. ನಂತರ ಇಬ್ಬರೂ ಸೇರಿ ಕೇತನ್‌ನನ್ನು ಕಂದಕಕ್ಕೆ ತಳ್ಳಿದರೆಂದು ಆರೋಪಿಸಲಾಗಿದೆ.ಪೊಲೀಸ್ ಮೂಲಗಳ ಪ್ರಕಾರ, ಇದು ಕೇತನ್ ಹತ್ಯೆಗೆ ನಡೆಸಿದ ಎರಡನೇ ಪ್ರಯತ್ನವಾಗಿತ್ತು. ಜೂನ್ 14ರಂದು ಕೂಡ ಇದೇ ಲೋಹಗಢ ಕೋಟೆಗೆ ಕೇತನ್‌ನನ್ನು ಕರೆದುಕೊಂಡು ಬಂದು, ಹಾವಿನ ಭಯ ಹುಟ್ಟಿಸಿ ಕಂದಕಕ್ಕೆ ತಳ್ಳಲು ಯತ್ನಿಸಲಾಗಿತ್ತು. ಆದರೆ ಆ ಪ್ರಯತ್ನ ವಿಫಲವಾಗಿತ್ತು ಎನ್ನಲಾಗಿದೆ.ಪ್ರಕರಣದ ಮತ್ತೊಂದು ಆಘಾತಕಾರಿ ಅಂಶವೆಂದರೆ, ಮದುವೆಗೆ ಮುನ್ನ ಕೇತನ್ ಮತ್ತು ಸಿಯಾ ಇಂಡೋನೇಷ್ಯಾದ ಬಾಲಿಗೆ ಪ್ರವಾಸ ಕೈಗೊಳ್ಳಲು ವಿಮಾನ ಟಿಕೆಟ್ ಹಾಗೂ ಹೋಟೆಲ್ ಬುಕ್ಕಿಂಗ್ ಮಾಡಿದ್ದರು. ಆದರೆ ಪ್ರವಾಸಕ್ಕೆ ಹೊರಡುವ ದಿನವೇ ಹೋಟೆಲ್‌ನ ಶೌಚಾಲಯದಲ್ಲಿ ಸಿಯಾ ತನ್ನ ಪಾಸ್‌ಪೋರ್ಟ್ ಅನ್ನು ಹರಿದು ಹಾಕಿ, ಅದು ಕಳೆದುಹೋಗಿದೆ ಎಂದು ನಾಟಕವಾಡಿದ್ದಳು. ಇದರಿಂದ ಪ್ರವಾಸ ರದ್ದಾಗಿತ್ತು ಎಂದು ಕೇತನ್ ಕುಟುಂಬಸ್ಥರು ಆರೋಪಿಸಿದ್ದಾರೆ.ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಕೇತನ್ ಮತ್ತು ಸಿಯಾ ಅವರ ವಿವಾಹ ಈ ವರ್ಷದ ನವೆಂಬರ್‌ನಲ್ಲಿ ನಡೆಯಬೇಕಿತ್ತು.

ಮದುವೆಗಾಗಿ ಎರಡೂ ಕುಟುಂಬಗಳು ರಾಜಸ್ಥಾನದ ಅರಮನೆಯೊಂದರಲ್ಲಿ ಅದ್ಧೂರಿ ಸಮಾರಂಭ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದವು. ಆದರೆ ಅಪಘಾತ ಎಂದು ನಂಬಿದ್ದ ಮಗನ ಸಾವು, ಮದುವೆಯಾಗಬೇಕಿದ್ದ ಯುವತಿಯಿಂದಲೇ ನಡೆದ ಕ್ರೂರ ಕೊಲೆ ಎಂಬ ಸಂಗತಿ ತಿಳಿದು ಕೇತನ್ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ.ಪ್ರಸ್ತುತ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಬಂಧಿಸಿರುವ ಪುಣೆ ಗ್ರಾಮಾಂತರ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!