
ಹೊಸದಿಲ್ಲಿ: ಪಾಸ್‌ಪೋರ್ಟ್ ಅನ್ನು ಭಾರತೀಯ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ. ಆದರೆ, ಪಾಸ್‌ಪೋರ್ಟ್ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಈಗ ಸ್ಪಷ್ಟಪಡಿಸಿದೆ. 14ನೇ ಪಾಸ್‌ಪೋರ್ಟ್ ಸೇವಾ ದಿವಸವಾದ ಬುಧವಾರ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಸಚಿವಾಲಯದ ಹೇಳಿಕೆಯು ಎಕ್ಸ್‌ನಲ್ಲಿ ಪೌರತ್ವದ ನಿರ್ಣಾಯಕ ಪುರಾವೆ ಯಾವುದು ಎಂಬ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಪೌರತ್ವದ ನಿರ್ಣಾಯಕ ಪುರಾವೆಯ ಅಸ್ಪಷ್ಟತೆಯು ಸರಕಾರವು ಈವರೆಗೂ ಬಗೆಹರಿಸದ ವಿಷಯವಾಗಿದೆ.ಪಾಸ್‌ಪೋರ್ಟ್‌ಗಳು ಪ್ರಮುಖವಾಗಿ ಅಂತರರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸಲು ಸರ್ಕಾರವು ನೀಡುವ ಪ್ರಯಾಣ ದಾಖಲೆಗಳಾಗಿವೆ ಎಂದು ಎಂಇಎ ತಿಳಿಸಿದೆ. ಇದರರ್ಥ ಪಾಸ್‌ಪೋರ್ಟ್ ಹೊಂದಿರುವುದು ಮಾತ್ರವೇ ಪೌರತ್ವವನ್ನು ವ್ಯಾಖ್ಯಾನಿಸುವುದಿಲ್ಲ.ಭಾರತೀಯ ಪ್ರಜೆಗಳಲ್ಲದವರಿಗೆ ಪಾಸ್‌ಪೋರ್ಟ್ ನೀಡಲಾಗುವುದಿಲ್ಲ,ಹೀಗಾಗಿ ಇದು ಪರಿಸ್ಥಿತಿಯ ವಿಡಂಬನೆಯನ್ನು ಎತ್ತಿ ತೋರಿಸುತ್ತದೆ.ಇಂಡಿಯಾ ಟುಡೇ ಗ್ರೂಪ್‌ನ ಕನ್ಸಲ್ಟಿಂಗ್ ಎಡಿಟರ್ ಬಿ.ವಿ.ರಾವ್ ಅವರು ವಿವರಿಸಿರುವಂತೆ ವಾಸ್ತವದಲ್ಲಿ ಪಾಸ್‌ಪೋರ್ಟ್ ಅದನ್ನು ಪಡೆದಿರುವ ವ್ಯಕ್ತಿಗೆ ಸೇರಿದ್ದಲ್ಲ. ಪಾಸ್‌ಪೋರ್ಟ್‌ನ ಹಿಂಬದಿಯಲ್ಲಿರುವ ಟಿಪ್ಪಣಿಯಲ್ಲಿ ‘ಇದು ಭಾರತ ಸರಕಾರದ ಆಸ್ತಿಯಾಗಿದೆ ಮತ್ತು ಸರಕಾರವು ಆದೇಶಿಸಿದರೆ ಇದನ್ನು ಮರಳಿ ಒಪ್ಪಿಸಬೇಕು’ಎಂದು ಉಲ್ಲೇಖಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು, ಆಧಾರ್ ಕಾರ್ಡ್ ಪೌರತ್ವದ ನಿರ್ಣಾಯಕ ಪುರಾವೆಯಲ್ಲ, ಅದು ಕೇವಲ ಗುರುತಿನ ದಾಖಲೆಯಾಗಿದೆ ಎಂದು ಸ್ಪಷ್ಟಪಡಿಸಿತ್ತು.ಮತದಾರರ ಗುರುತಿನ ಚೀಟಿಯನ್ನೂ ಸಹ ಪೌರತ್ವ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ. ಇದು ಪ್ರಮುಖವಾಗಿ ಗುರುತು ಮತ್ತು ನಿವಾಸದ ದಾಖಲೆಯಾಗಿದ್ದು, ಚುನಾವಣೆಯಲ್ಲಿ ವ್ಯಕ್ತಿಯು ತನ್ನ ಮತದಾನದ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡುತ್ತದೆ.ಪೌರತ್ವ ಕಾಯ್ದೆಗಳ ಪ್ರಕಾರ,ಒಬ್ಬ ವ್ಯಕ್ತಿಯು ಜನವರಿ 26, 1950ರಂದು ಅಥವಾ ಅದರ ನಂತರ, ಆದರೆ ಜುಲೈ 1,1987 ಕ್ಕಿಂತ ಮೊದಲು ದೇಶದಲ್ಲಿ ಜನಿಸಿದರೆ ಹುಟ್ಟಿನಿಂದಲೇ ಭಾರತೀಯನಾಗುತ್ತಾನೆ. ಈಗ ಜುಲೈ 1987ರ ನಂತರ ಜನಿಸಿದ ವ್ಯಕ್ತಿಯು ತಂದೆ ಅಥವಾ ತಾಯಿಯ ಪೈಕಿ ಯಾರಾದರೂ ಒಬ್ಬರು ಭಾರತೀಯ ನಾಗರಿಕರಾಗಿದ್ದರೆ ಪೌರತ್ವವನ್ನು ಪಡೆಯಬಹುದು.
ಡಿಸೆಂಬರ್ 3, 2004ರಂದು ಅಥವಾ ಅದರ ನಂತರ ಜನಿಸಿದವರು ಪೋಷಕರಿಬ್ಬರೂ ಭಾರತೀಯರಾಗಿದ್ದರೆ ಮಾತ್ರ ಅಥವಾ ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕರಾಗಿದ್ದು ಇನ್ನೊಬ್ಬರು ಮಗುವಿನ ಜನನದ ಸಮಯದಲ್ಲಿ ಕಾನೂನುಬಾಹಿರ ವಲಸಿಗರಾಗಿರದಿದ್ದರೆ ಮಾತ್ರ ಹುಟ್ಟಿನಿಂದ ಪೌರತ್ವವನ್ನು ಪಡೆಯಬಹುದು.2025 ರಲ್ಲಿ 1.5 ಕೋಟಿ ಪಾಸ್‌ಪೋರ್ಟ್ ಮತ್ತು ಸಂಬಂಧಿತ ಸೇವೆಗಳನ್ನು ವಿತರಿಸಲಾಗಿದೆ. ಈ ಪೈಕಿ ಪಾಸ್‌ಪೋರ್ಟ್‌ಗಳೇ 1.39 ಕೋಟಿಯಷ್ಟಿವೆ. ಅಲ್ಲದೆ ಪಾಸ್‌ಪೋರ್ಟ್ ವಿತರಣೆಯ ಸರಾಸರಿ ಅವಧಿಯೂ ಕಡಿಮೆಯಾಗಿದೆ. ಪೊಲೀಸ್ ಪರಿಶೀಲನೆಗೆ ತೆಗೆದುಕೊಳ್ಳುವ ಸಮಯವನ್ನು ಹೊರತುಪಡಿಸಿ ಕೇವಲ ಆರು ಕೆಲಸದ ದಿನಗಳಲ್ಲಿ ಪಾಸ್‌ಪೋರ್ಟ್‌ಗಳನ್ನು ತಲುಪಿಸಲಾಗುತ್ತಿದೆ.
ನಾಗರಿಕರು ಈಗ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಸರಾಸರಿ 45 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಎಂಇಎ ಅಧಿಕಾರಿಯೋರ್ವರು ತಿಳಿಸಿದರು.








