

ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆ, ವಿಟ್ಲ ಇದರ 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮಂತ್ರಿಮಂಡಲ ಪದಗ್ರಹಣ ಸಮಾರಂಭವು ಗುರುವಾರ ಶಾಲಾ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಪುತ್ತೂರಿನ ಪ್ರಾಂಶುಪಾಲರಾದ ವಂದನೀಯ ಅಶೋಕ್ ರಾಯನ್ ಕ್ರಾಸ್ತಾ ಭಾಗವಹಿಸಿ ವಿದ್ಯಾರ್ಥಿಗಳಿಗೆ ನಾಯಕತ್ವ, ಸೇವಾ ಮನೋಭಾವ ಹಾಗೂ ಜವಾಬ್ದಾರಿಯುತ ಜೀವನದ ಮಹತ್ವದ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.




ಶಾಲಾ ಸಂಚಾಲಕರಾದ ವಂದನೀಯ ಮೈಕೆಲ್ ಲೋಬೋ, ಸಂಸ್ಥೆಯ ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೊಡ್ರಿಗಸ್, ಮುಖ್ಯಶಿಕ್ಷಕರಾದ ಸಿಸ್ಟರ್ ಮರೀನಾ, ಸಿಸ್ಟರ್ ಜಾನೆಟ್ ಹಾಗೂ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರಾದ ವಲೇರಿಯನ್ ವೇಗಸ್ ಉಪಸ್ಥಿತರಿದ್ದರು.
ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಪ್ರಾಂಶುಪಾಲರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಸ್ಯಾಶ್‌ಗಳನ್ನು ಪ್ರದಾನ ಮಾಡಿ ಪ್ರಮಾಣ ವಚನ ಬೋಧಿಸಿದರು. ನಂತರ ವಿದ್ಯಾರ್ಥಿ ನಾಯಕ ಮಂಡಳಿಯನ್ನು ವಿನೂತನ ಶೈಲಿಯಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಪರಿಸರ ಸಂಘ, ವಿಜ್ಞಾನ ಸಂಘ, ಕಲೆ ಮತ್ತು ಸಾಹಿತ್ಯ ಸಂಘ, ಮಾನವೀಯತೆ ಸಂಘ ಹಾಗೂ ಸಾಂಸ್ಕೃತಿಕ ಸಂಘಗಳನ್ನೂ ಉದ್ಘಾಟಿಸಲಾಯಿತು.
ಅಧ್ಯಕ್ಷೀಯ ಭಾಷಣ ಮಾಡಿದ ವಂದನೀಯ ಮೈಕೆಲ್ ಲೋಬೋ ಅವರು ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ವಿವಿಧ ಸಂಘಗಳ ವತಿಯಿಂದ ಹಾಡು, ನೃತ್ಯ, ಪ್ರಹಸನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಾರ್ಯಕ್ರಮವನ್ನು ಸಂಧ್ಯಾ ಎಂ.ಡಿ. ಹಾಗೂ ಸಂಧ್ಯಾ ಕೆ. ಅವರು ನಿರೂಪಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.








