Saturday, June 27, 2026
spot_imgspot_img
spot_imgspot_img

ಖ್ಯಾತ ತಮಿಳು ನಿರ್ದೇಶಕ ಕೆ. ಭಾಗ್ಯರಾಜ್ ನಿಧನ

- Advertisement -
- Advertisement -

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ಖ್ಯಾತ ಚಿತ್ರಕಥೆಗಾರ ಹಾಗೂ ನಟ ಕೆ. ಭಾಗ್ಯರಾಜ್ (ಕೃಷ್ಣಸ್ವಾಮಿ ಭಾಗ್ಯರಾಜ್) ಶನಿವಾರ(ಜೂ.27) ಹೃದಯಾಘಾತದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರ ಅಗಲಿಕೆಯಿಂದ ತಮಿಳು ಚಿತ್ರರಂಗ ತನ್ನ ಅತ್ಯಂತ ಪ್ರತಿಭಾವಂತ ಕಥೆಗಾರರಲ್ಲಿ ಒಬ್ಬರನ್ನು ಕಳೆದುಕೊಂಡಂತಾಗಿದೆ.

ಮಧ್ಯಮ ವರ್ಗದ ಕುಟುಂಬಗಳ ಬದುಕು, ಸಂಬಂಧಗಳ ಸೂಕ್ಷ್ಮತೆ ಹಾಗೂ ಮನಸ್ಸಿಗೆ ಹತ್ತಿರವಾಗುವ ಕಥೆಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಭಾಗ್ಯರಾಜ್, ತಮ್ಮ ವಿಶಿಷ್ಟ ಚಿತ್ರಕಥೆ ಮತ್ತು ನಿರ್ದೇಶನ ಶೈಲಿಯಿಂದ ದಶಕಗಳ ಕಾಲ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದರು.

ಚೆನ್ನೈನಲ್ಲಿ ವಾಸವಾಗಿದ್ದ ಭಾಗ್ಯರಾಜ್ ಅವರಿಗೆ ಹಠಾತ್ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಗೋವಾದಲ್ಲಿ ನಡೆದ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಕುಟುಂಬದೊಂದಿಗೆ ಭಾಗವಹಿಸಿದ್ದರು. ಭಾಗ್ಯರಾಜ್ ಅವರ ಪತ್ನಿ ಪೂರ್ಣಿಮಾ ಮಾಜಿ ನಟಿಯಾಗಿದ್ದು, ಪುತ್ರ ಶಂತನು ಭಾಗ್ಯರಾಜ್ ಹಾಗೂ ಪುತ್ರಿ ಶರಣ್ಯ ಇದ್ದಾರೆ. ಪುತ್ರ ಶಂತನು ಕೂಡ ತಮಿಳು ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ.

ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಜನಿಸಿದ ಕೆ. ಭಾಗ್ಯರಾಜ್, ತಮ್ಮ ಸಿನಿಮಾ ಜೀವನವನ್ನು ಸಹಾಯಕ ನಿರ್ದೇಶಕರಾಗಿ ಆರಂಭಿಸಿದರು. ಖ್ಯಾತ ನಿರ್ದೇಶಕ ಭಾರತೀರಾಜ ಅವರ ಮಾರ್ಗದರ್ಶನದಲ್ಲಿ ಸಿನಿಮಾ ಕಲಿತ ಅವರು, ಬಳಿಕ ಸ್ವತಂತ್ರ ನಿರ್ದೇಶಕರಾಗಿ ಅದ್ಭುತ ಯಶಸ್ಸು ಗಳಿಸಿದರು. 1980 ಹಾಗೂ 1990ರ ದಶಕದಲ್ಲಿ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸಿನ ಹೊಸ ದಾಖಲೆಗಳನ್ನು ನಿರ್ಮಿಸಿದ್ದವು. ಸರಳ ಕಥೆಗಳ ಮೂಲಕ ಸಮಾಜದ ವಾಸ್ತವ ಚಿತ್ರಣವನ್ನು ತೆರೆ ಮೇಲೆ ತಂದ ಅವರು, ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದರು.

ಭಾಗ್ಯರಾಜ್ ತಮ್ಮ ವೃತ್ತಿಜೀವನದಲ್ಲಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದು, 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರರಂಗದ ಶ್ರೇಷ್ಠ ಚಿತ್ರಕಥೆಗಾರರಲ್ಲಿ ಒಬ್ಬರೆಂದು ಅವರನ್ನು ಪರಿಗಣಿಸಲಾಗುತ್ತದೆ. ಅವರ ನಿರ್ದೇಶನದ ‘ಮುಂದಾನೈ ಮುಡಿಚ್ಚು’, ‘ಅಂದ 7 ನಾಟ್ಕಳ್’, ‘ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್’ ಸೇರಿದಂತೆ ಹಲವು ಚಿತ್ರಗಳು ಇಂದಿಗೂ ಕ್ಲಾಸಿಕ್ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕೆ. ಭಾಗ್ಯರಾಜ್ ಅವರಿಗೆ ಕನ್ನಡ ಚಿತ್ರರಂಗದೊಂದಿಗೂ ವಿಶೇಷ ನಂಟಿತ್ತು. 2015ರಲ್ಲಿ ಬಿಡುಗಡೆಯಾದ ‘ರೆಡ್ ಅಲರ್ಟ್’ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2025ರಲ್ಲಿ ಬಿಡುಗಡೆಯಾದ ‘ಕುಬೇರ’ ಅವರ ನಟನೆಯ ಕೊನೆಯ ಚಿತ್ರವಾಗಿದೆ.

- Advertisement -

Related news

error: Content is protected !!