ಹಾಸನ: ಸಕಲೇಶಪುರ ತಹಶೀಲ್ದಾರ್ ಸಂಚರಿಸುತ್ತಿದ್ದ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿರುವುದು ವರದಿಯಾಗಿದೆ.ಹಾಸನದ ಪೆನ್ಷನ್ ಮೊಹಲ್ಲಾ ನಿವಾಸಿ ಜಮ್ಮಿದ್ (58) ಮೃತಪಟ್ಟವರು.

ಇವರ ಜೊತೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ನದೀಮ್ ಎಂಬವರು ಗಾಯಗೊಂಡಿದ್ದಾರೆ.ಜಮ್ಮಿದ್ ಹಾಗೂ ನದೀಮ್ ಇಂದು ಮಧ್ಯಾಹ್ನ ಕೆಲಸದ ನಿಮಿತ್ತ ಬೈಕಿನಲ್ಲಿ ಸಕಲೇಶಪುರಕ್ಕೆ ತೆರಳುತ್ತಿದ್ದರು. ಇವರು ಸಂಚರಿಸುತ್ತಿದ್ದ ಬೈಕ್ ಈಶ್ವರಹಳ್ಳಿ ಕೂಡಿಗೆ ಸರ್ಕಲ್ ಬಳಿ ತಲುಪಿದಾಗ ಸಕಲೇಶಪುರ ತಹಶೀಲ್ದಾರ್ ಸುಪ್ರೀತಾ ಅವರಿದ್ದ ಜೀಪ್ ಅತಿ ವೇಗವಾಗಿ ಬಂದು ಇವರ ಬೈಕಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಬೈಕಿನಲ್ಲಿದ್ದ ಜಮ್ಮಿದ್ (58) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂಭವಿಸಿದ ವೇಳೆ ಜೀಪ್ನಲ್ಲಿಯೇ ಇದ್ದ ಸಕಲೇಶಪುರ ತಹಶೀಲ್ದಾರ್ ಸುಪ್ರೀತಾ, ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಸದ್ಯ ಗಾಯಾಳು ನದೀಮ್ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಘಟನಾ ಸ್ಥಳಕ್ಕೆ ಆಲೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಆಲೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








