Tuesday, June 30, 2026
spot_imgspot_img
spot_imgspot_img

ಸಿನಿಮೀಯ ದರೋಡೆಗೆ ಹೊಸ ತಿರುವು: ಕಾರಿನೊಂದಿಗೆ ಪರಾರಿಯಾಗಿದ್ದ ಆರೋಪಿಗಳು-ಬಂಟ್ವಾಳದಲ್ಲಿ ಕಾರನ್ನು ಬಿಟ್ಟು ಎಸ್ಕೇಪ್ ಆದ ಆರೋಪಿಗಳು

- Advertisement -
- Advertisement -

ಮಂಗಳೂರು: ಸುರತ್ಕಲ್ ಸಮೀಪದ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದ ಚಿನ್ನದ ವ್ಯಾಪಾರಿ ಹಾಗೂ ಅವರ ಕುಟುಂಬವನ್ನು ಬೆದರಿಸಿ ಸುಮಾರು ₹20 ಲಕ್ಷ ಮೌಲ್ಯದ ಚಿನ್ನ ಮತ್ತು ನಗದು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ದರೋಡೆಕೋರರು ಕೊಂಡೊಯ್ದಿದ್ದ ಕಾರು ಬಂಟ್ವಾಳ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಕಾರನ್ನು ಬಂಟ್ವಾಳದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಕಾರಿನೊಳಗಿನ ಸೀಟ್ ಕವರ್‌ಗಳನ್ನೂ ಹರಿದು ಹಾಕುವಷ್ಟು ಸೂಕ್ಷ್ಮವಾಗಿ ವಾಹನವನ್ನು ಶೋಧಿಸಿರುವುದು ಕಂಡುಬಂದಿದೆ. ಇನ್ನೂ ಹೆಚ್ಚಿನ ಚಿನ್ನ ಅಥವಾ ಬೆಲೆಬಾಳುವ ವಸ್ತುಗಳಿಗಾಗಿ ಅವರು ವಾಹನವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಕೇರಳದ ಪಯ್ಯನ್ನೂರು ನಿವಾಸಿ ಹಾಗೂ ಚಿನ್ನದ ವ್ಯಾಪಾರಿ ವಿಕಾಸ್ ಅವರು ಪತ್ನಿ ಮತ್ತು ಪುತ್ರನೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಯಿಂದ ಮಂಗಳೂರಿನತ್ತ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಬೈಕಂಪಾಡಿ ಬಳಿ ಎರಡು ಇನೋವಾ ಮತ್ತು ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಸಶಸ್ತ್ರ ದರೋಡೆಕೋರರ ತಂಡ ಸಿನಿಮೀಯ ರೀತಿಯಲ್ಲಿ ವಾಹನವನ್ನು ಅಡ್ಡಗಟ್ಟಿ ದರೋಡೆ ನಡೆಸಿತ್ತು. ಬಳಿಕ ವಿಕಾಸ್ ಅವರ ಪತ್ನಿ ಮತ್ತು ಪುತ್ರನನ್ನು ಕುಳೂರು ಬಳಿ ಕಾರಿನಿಂದ ಕೆಳಗಿಳಿಸಿ, ಕಾರಿನಲ್ಲಿದ್ದ ಚಿನ್ನ ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದರು.ಇದೀಗ ಪತ್ತೆಯಾದ ಕಾರನ್ನು ಪೊಲೀಸರು ವಶಕ್ಕೆ ಪಡೆದು ವೈಜ್ಞಾನಿಕ ಪರಿಶೀಲನೆ ನಡೆಸುತ್ತಿದ್ದಾರೆ. ವಾಹನದಲ್ಲಿರುವ ಬೆರಳಚ್ಚು ಸೇರಿದಂತೆ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.

ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ತಂಡಗಳು ವಿವಿಧ ಸುಳಿವುಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿವೆ. ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದ್ದು, ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!