
ಮಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಚಾಲನೆ ದೊರೆತಿದ್ದು, ಜಿಲ್ಲೆಯಾದ್ಯಂತ ಬಿಎಲ್‌ಒಗಳು (ಬೂತ್ ಮಟ್ಟದ ಅಧಿಕಾರಿಗಳು) ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ (Enumeration Form) ವಿತರಿಸುವ ಕಾರ್ಯ ಆರಂಭಿಸಿದ್ದಾರೆ.
ಜಿಲ್ಲೆಯ 1,876 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗುತ್ತಿದೆ. ನಗರದ ಕೆಲವು ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ ನೀಡಿ ಮತದಾರರಿಗೆ ನಮೂನೆ ವಿತರಿಸುವ ಜೊತೆಗೆ ಎಸ್‌ಐಆರ್ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ರಾಜು ಕೆ. ಉಪಸ್ಥಿತರಿದ್ದರು.ಜಿಲ್ಲೆಯ ವಿವಿಧೆಡೆ ಹಿರಿಯ ಅಧಿಕಾರಿಗಳು ಸಹ ಮನೆ ಮನೆಗೆ ತೆರಳಿ ಪ್ರಕ್ರಿಯೆ ಪರಿಶೀಲಿಸಿದರು.
ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗಡೆ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನಿವಾಸಗಳಿಗೂ ಅಧಿಕಾರಿಗಳು ಭೇಟಿ ನೀಡಿ ಗಣತಿ ನಮೂನೆಗಳನ್ನು ನೀಡಿದರು. ಹಿರಿಯ ನಾಗರಿಕರನ್ನು ಖುದ್ದಾಗಿ ಭೇಟಿ ಮಾಡಿ ನಮೂನೆ ವಿತರಿಸಲಾಯಿತು.ಮತದಾರರಿಗೆ ದ್ವಿಪ್ರತಿಯಲ್ಲಿ ಗಣತಿ ನಮೂನೆ ನೀಡಲಾಗಿದ್ದು, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಒಂದು ಪ್ರತಿಯನ್ನು ಬಿಎಲ್‌ಒಗಳಿಗೆ ಸಲ್ಲಿಸಿ, ಮತ್ತೊಂದು ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಅರ್ಜಿ ಭರ್ತಿಗೆ ನೆರವಾಗಲು ಪ್ರತಿ ಮತಗಟ್ಟೆಯಲ್ಲೂ ಮತದಾರರ ಸೌಲಭ್ಯ ಕೇಂದ್ರ (Voter Facilitation Centre) ಸ್ಥಾಪಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 18,05,189 ಮತದಾರರು ಇದ್ದು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹರು ಪಟ್ಟಿಗೆ ಸೇರ್ಪಡೆಯಾಗದಂತೆ ನೋಡಿಕೊಳ್ಳುವುದು ಈ ವಿಶೇಷ ಪರಿಷ್ಕರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.ಮನೆ ಮನೆ ಭೇಟಿ ಕಾರ್ಯ ಜುಲೈ 29ರವರೆಗೆ ನಡೆಯಲಿದ್ದು, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಅವಕಾಶವಿದ್ದು, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.
ಗಣತಿ ನಮೂನೆ ಸ್ವೀಕರಿಸಿದ ಮನೆಗಳಿಗೆ ನೇರಳೆ ಬಣ್ಣದ ಸ್ಟಿಕ್ಕರ್, ಮನೆ ಬೀಗ ಹಾಕಿರುವುದಾಗಿ ಕಂಡುಬಂದರೆ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತವು ಬಿಎಲ್‌ಒಗಳಿಗೆ ಅಗತ್ಯ ಸಹಕಾರ ನೀಡುವಂತೆ ಜಿಲ್ಲೆಯ ಎಲ್ಲಾ ಮತದಾರರಲ್ಲಿ ಮನವಿ ಮಾಡಿದೆ.








