
ವಿಟ್ಲ: ಬಿಸಿರೋಡಿನ ಆಡಳಿತ ಸೌಧದ ಆವರಣದಲ್ಲಿ ಅನಧಿಕೃತವಾಗಿ ಖಾಸಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅನಧಿಕೃತ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಜು.7ರಿಂದ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಂಜುಮಾಥ್ ತಿಳಿಸಿದ್ದಾರೆ.ಆಡಳಿತ ಸೌಧಕ್ಕೆ ಪ್ರತಿನಿತ್ಯ ವಿವಿಧ ಸರ್ಕಾರಿ ಕಚೇರಿಗಳಿಗೆ ನೂರಾರು ಸಾರ್ವಜನಿಕರು ಭೇಟಿ ನೀಡುತ್ತಾರೆ. ಆದರೆ ಆವರಣದೊಳಗೆ ಖಾಸಗಿ ವಾಹನಗಳನ್ನು ಮನಬಂದಂತೆ ನಿಲ್ಲಿಸಲಾಗುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ತುರ್ತು ಕೆಲಸಗಳಿಗಾಗಿ ಬರುವ ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಓಡಾಟ ನಡೆಸಲು ಸಾಕಷ್ಟು ತೊಂದರೆ ಉಂಟಾಗುತ್ತಿದೆ.
ಕೆಲವರು ತಮ್ಮ ವಾಹನಗಳನ್ನು ಆಡಳಿತ ಸೌಧದ ಆವರಣದಲ್ಲಿ ನಿಲ್ಲಿಸಿ, ಅಲ್ಲಿಂದ ಮಂಗಳೂರು ಸೇರಿದಂತೆ ಇತರ ಪ್ರದೇಶಗಳಿಗೆ ತೆರಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದರಿಂದ ದಿನವಿಡೀ ವಾಹನಗಳು ಆವರಣದಲ್ಲೇ ನಿಂತುಕೊಂಡಿದ್ದು, ಕಚೇರಿಗೆ ಬರುವ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸ್ಥಳಾವಕಾಶ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತ ಸೌಧದ ಆವರಣದಲ್ಲಿ ಇರುವ ‘ನೋ ಪಾರ್ಕಿಂಗ್’ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಪೊಲೀಸ್ ಇಲಾಖೆಯ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ವಾಹನಗಳನ್ನು ತೆರವುಗೊಳಿಸುವುದು ಹಾಗೂ ದಂಡ ವಿಧಿಸುವ ಕ್ರಮವೂ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ್ ರವರು ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಆಡಳಿತ ಸೌಧದಲ್ಲಿ ನಿಗದಿಪಡಿಸಿರುವ ವಾಹನ ನಿಲುಗಡೆ ಸ್ಥಳಗಳಲ್ಲೇ ನಿಲ್ಲಿಸಬೇಕು. ‘ನೋ ಪಾರ್ಕಿಂಗ್’ ಫಲಕ ಅಳವಡಿಸಿರುವ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ವಾಹನ ನಿಲ್ಲಿಸಬಾರದು. ಸಾರ್ವಜನಿಕರು ಸಹಕರಿಸಿದರೆ ಆಡಳಿತ ಸೌಧದ ಆವರಣದಲ್ಲಿ ಸುಗಮ ವಾಹನ ಸಂಚಾರ ಹಾಗೂ ಉತ್ತಮ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಮಂಜುನಾಥ್ ರವರು ಮನವಿ ಮಾಡಿದ್ದಾರೆ.








