Wednesday, July 8, 2026
spot_imgspot_img
spot_imgspot_img

ದಟ್ಟವಾದ ತೋಟದಲ್ಲಿ ಅಡಗಿದ್ದ ಓರ್ವ ಲಷ್ಕರ್ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

- Advertisement -
- Advertisement -

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಐದು ದಿನಗಳಿಂದ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳುತ್ತಿದ್ದ ಶಂಕಿತ ಲಷ್ಕರ್-ಎ-ತೊಯ್ಬಾ ಉಗ್ರನನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿವೆ.

ದಕ್ಷಿಣ ಕಾಶ್ಮೀರದ ಸೈದ್‌ಪೋರಾ ಪ್ರದೇಶದಲ್ಲಿ ಉಗ್ರನ ಮೃತದೇಹ ಪತ್ತೆಯಾಗಿದ್ದು, ಸ್ಥಳದಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಐದು ದಿನಗಳ ಹಿಂದೆ ಸೈದ್‌ಪೋರಾದ ದಟ್ಟ ತೋಟವೊಂದರಲ್ಲಿ ಇಬ್ಬರು ಉಗ್ರರು ಸಂಚರಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳ ಆಧಾರದ ಮೇಲೆ ಭದ್ರತಾ ಪಡೆಗಳು ವ್ಯಾಪಕ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಿದ್ದವು.

ಲಷ್ಕರ್ ಕಮಾಂಡರ್ ಜಾಕಿರ್ ಗನಾಯಿ ಮತ್ತು ಆತನ ಸಹಚರ ಲತೀಫ್ ಭಟ್ ಈ ಪ್ರದೇಶದಲ್ಲಿ ಅಡಗಿರುವ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಇಬ್ಬರೂ ಸೈದ್‌ಪೋರಾದ ಛನ್ನಾಪೋರಾ ಪ್ರದೇಶದಲ್ಲಿ ಚಲನವಲನ ನಡೆಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗುತ್ತಿದ್ದಂತೆಯೇ, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದು ಬಿಗಿ ಕಾರ್ಯಾಚರಣೆ ಕೈಗೊಂಡಿದ್ದವು.

ಕಾರ್ಯಾಚರಣೆ ವೇಳೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಮೃತ ಉಗ್ರನ ಗುರುತನ್ನು ಅಧಿಕೃತವಾಗಿ ದೃಢೀಕರಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ ಪೊಲೀಸ್, ರಾಷ್ಟ್ರಿಯ ರೈಫಲ್ಸ್ ಹಾಗೂ ಸಿಆರ್‌ಪಿಎಫ್ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿವೆ. ಸೇನೆಯ ವಿಶೇಷ ಉಗ್ರ ನಿಗ್ರಹ ಘಟಕ ‘ವಿಕ್ಟರ್ ಫೋರ್ಸ್’ ತೋಟ ಪ್ರದೇಶದ ಎಲ್ಲಾ ನಿರ್ಗಮನ ಮಾರ್ಗಗಳನ್ನು ಬಂದ್ ಮಾಡಿ, ಉಗ್ರರು ತಪ್ಪಿಸಿಕೊಳ್ಳದಂತೆ ಕಟ್ಟುನಿಟ್ಟಿನ ಭದ್ರತಾ ವಲಯ ನಿರ್ಮಿಸಿತ್ತು. ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪ್ರದೇಶದಲ್ಲಿ ವಿಶೇಷ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಕಾರ್ಯಾಚರಣೆಯ ಯಶಸ್ಸಿನ ಬಳಿಕ ಜಮ್ಮು-ಕಾಶ್ಮೀರ ಪೊಲೀಸರು ಎಕ್ಸ್‌ನಲ್ಲಿ, ‘ಓಡಬಹುದು… ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ’ ಎಂದು ಪೋಸ್ಟ್ ಮಾಡಿ ಭದ್ರತಾ ಪಡೆಗಳ ಕಾರ್ಯಾಚರಣೆಯ ಯಶಸ್ಸನ್ನು ಹಂಚಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!