



ಬೆಳ್ತಂಗಡಿ: ಎಸ್ಐಆರ್ ಕರ್ತವ್ಯಕ್ಕೆ ತೆರಳಿದ ದಲಿತ ಸಮುದಾಯಕ್ಕೆ ಸೇರಿದ ಬಿ.ಎಲ್.ಒ ರನ್ನು ಜಾತಿ ನಿಂದನೆ ಮಾಡಿ ಅಪಮಾನಿಸಿರುವ ಘಟನೆ ಶಿರ್ಲಾಲು ಗ್ರಾಮದ ಪಲ್ಲದೋಡಿ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಸಂತ್ರಸ್ತೆ ನೀಡಿರುವ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಬಿಎಲ್.ಒ. ಆಗಿ ಕೆಲಸ ಮಾಡುತ್ತಿದ್ದು, ಜು.6 ರಂದು ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬವರ ಮನೆಗೆ ಎ.ಎಲ್.ಒ ಮಾಧವ ಎಂಬರೊಂದಿಗೆ ತೆರಳಿದ್ದರು.
ಈ ವೇಳೆ ಮನೆಯ ಅಂಗಳಕ್ಕೆ ಪ್ರವೇಶಿಸಿದಾಗ “ನೀನು ಅಲ್ಲಿಯೇ ನಿಲ್ಲು ನಿಮ್ಮ ಜಾತಿಯವರು ಈ ಕಡೆ ಬರಬಾರದು” ಎಂದು ಹೇಳಿದ ಮನೆಯ ಯಜಮಾನಿ ಯಶೋಧ ಆಚಾರಿ ಮನೆಯ ಸಿಟ್ ಔಟ್ ಗೆ ಪ್ರವೇಶಿಸದಂತೆ ಮೆಟ್ಟಿಲ ಬಳಿ ಮಾತಿನಲ್ಲೇ ತಡೆದು ನಿಲ್ಲಿಸಿದ್ದಾರೆ. ಈ ರೀತಿ ಯಶೋಧ ಆಚಾರಿ ಅಪಮಾನ ಮಾಡಿ, ಜಾತಿ ನಿಂದನೆ ಮಾಡಿರುವುದಾಗಿ ಬಿಎಲ್.ಒ. ಜು.7 ರಂದು ಪೊಲೀಸ್ ದೂರು ನೀಡಿದ್ದಾರೆ.
ಬಿ.ಎಲ್.ಒ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಯಶೋಧ ಆಚಾರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








