Wednesday, July 8, 2026
spot_imgspot_img
spot_imgspot_img

ಐವರು ಸಿಬ್ಬಂದಿ ಹೊತ್ತಿದ್ದ ಪಾಕಿಸ್ತಾನದ ವಿಮಾನ ಅರಬ್ಬಿ ಸಮುದ್ರದಲ್ಲಿ ನಾಪತ್ತೆ

- Advertisement -
- Advertisement -

ಇಸ್ಲಾಮಾಬಾದ್: ಯುನೈಟೆಡ್ ಅರಬ್ ಎಮಿರೇಟ್ಸ್​​ನಿಂದ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಸರಕು ವಿಮಾನವೊಂದು ಮಂಗಳವಾರ ರಾತ್ರಿ ಅರಬ್ಬಿ ಸಮುದ್ರದ ಮೇಲೆ ದಿಢೀರ್ ರಾಡಾರ್‌ನಿಂದ ನಾಪತ್ತೆಯಾಗಿದೆ. ಐವರು ಸಿಬ್ಬಂದಿಯನ್ನು ಹೊತ್ತಿದ್ದ ಈ ವಿಮಾನದ ಪತ್ತೆಗಾಗಿ ಸಮುದ್ರದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಶಾರ್ಜಾದಿಂದ ಕರಾಚಿಗೆ ಹೊರಟಿದ್ದ ಈ ಕಾರ್ಗೋ ವಿಮಾನದಲ್ಲಿ ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ವಿಮಾನದ ನ್ಯಾವಿಗೇಷನ್ ಸಿಸ್ಟಮ್‌ನಲ್ಲಿ ದೋಷ ಕಂಡುಬಂದಿದೆ ಎಂದು ಪೈಲಟ್ ಕರಾಚಿ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ತಕ್ಷಣವೇ ನಿಯಂತ್ರಣ ಕೇಂದ್ರದಿಂದ ವಿಮಾನಕ್ಕೆ ಸೂಕ್ತ ಮಾರ್ಗದರ್ಶನ ನೀಡಲಾಗಿತ್ತು ಎಂದು ಪಾಕಿಸ್ತಾನದ ವಿಮಾನ ನಿಲ್ದಾಣ ಪ್ರಾಧಿಕಾರ ಮಾಹಿತಿ ನೀಡಿದೆ.

ರಾತ್ರಿ 9.18ಕ್ಕೆ ವಿಮಾನದ ಕೊನೆಯ ಸಂಪರ್ಕ ಸಿಕ್ಕಿತ್ತು. ಸಮಸ್ಯೆ ತಿಳಿಸಿದ ಕೇವಲ 4 ನಿಮಿಷಗಳಲ್ಲಿ, ಅಂದರೆ ರಾತ್ರಿ 9.22 ರ ಸುಮಾರಿಗೆ ವಿಮಾನವು ಇದ್ದಕ್ಕಿದ್ದಂತೆ ತನ್ನ ದಿಕ್ಕನ್ನು ಬದಲಾಯಿಸಿ ಅತಿ ವೇಗವಾಗಿ ಕೆಳಮುಖವಾಗಿ ಇಳಿಯುವುದನ್ನು ರಾಡಾರ್‌ನಲ್ಲಿ ಗಮನಿಸಲಾಯಿತು ಎಂದು ತಿಳಿಸಿದೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ಕರಾಚಿಯಿಂದ ಪಶ್ಚಿಮಕ್ಕೆ ಸುಮಾರು 155 ನಾಟಿಕಲ್ ಮೈಲಿ ದೂರದಲ್ಲಿ ವಿಮಾನದ ಜೊತೆಗಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ವಿಮಾನವು ರಾಡಾರ್‌ನಿಂದ ಕಣ್ಮರೆಯಾಗಿದ್ದು, ಸಮುದ್ರಕ್ಕೆ ಅಪ್ಪಳಿಸಿರುವ ಶಂಕೆ ವ್ಯಕ್ತವಾಗಿದೆ.

ನಾಪತ್ತೆಯಾಗಿರುವ ವಿಮಾನ ಹಾಗೂ ಅದರಲ್ಲಿದ್ದ ಐವರು ಸಿಬ್ಬಂದಿಯನ್ನು ಪತ್ತೆಹಚ್ಚಲು ಹಲವು ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ವಿಮಾನದಲ್ಲಿದ್ದ ಐವರು ಸಿಬ್ಬಂದಿ ಯಾರು ಎಂಬ ಬಗ್ಗೆ ಪ್ರಾಧಿಕಾರ ಈವರೆಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

- Advertisement -

Related news

error: Content is protected !!