Sunday, July 12, 2026
spot_imgspot_img
spot_imgspot_img

ಸಣ್ಣ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬೆನ್ನಲ್ಲೇ 18 ತಿಂಗಳ ಮಗು ಸಾವು

- Advertisement -
- Advertisement -

ಕೇರಳ ವೈದ್ಯರ ವಿರುದ್ಧ ಕೇಸ್ ದಾಖಲು

ತಿರುವನಂತಪುರಂ: ಕೇವಲ ತುಟಿಯ ಮೇಲಾದ ಸಣ್ಣ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬೆನ್ನಲ್ಲೇ ಒಂದೂವರೆ ವರ್ಷದ ಗಂಡು ಮಗುವೊಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ದೇವನ್ಶ್ ಶೌರ್ಯ (18 ತಿಂಗಳು) ಮೃತಪಟ್ಟ ಮಗು. ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಅರಿವಳಿಕೆ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೇವನ್ಶ್ ಇರಾಮಮ್-ಕುಟ್ಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದ ತೇರಂಗಲ್ ನಿವಾಸಿಗಳಾದ ಟಿ. ಸೂರಜ್ ಮತ್ತು ವಿಜಿಶಾ ದಂಪತಿಯ ಏಕೈಕ ಪುತ್ರನಾಗಿದ್ದ. ಮದುವೆಯಾದ 8 ವರ್ಷಗಳ ಬಳಿಕ ಈ ದಂಪತಿಗೆ ಮಗು ಜನಿಸಿತ್ತು.

ಜುಲೈ 5 ರಂದು ದೇವನ್ಶ್ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು, ಕೆಳತುಟಿಗೆ ಸಣ್ಣದಾಗಿ ಗಾಯವಾಗಿತ್ತು. ಪೋಷಕರು ತಕ್ಷಣವೇ ದೇವನ್ಶ್‌ನನ್ನು ಪಯ್ಯನ್ನೂರಿನಲ್ಲಿರುವ ಬೇಬಿ ಮೆಮೋರಿಯಲ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಗಾಯಕ್ಕೆ ಹೊಲಿಗೆ ಹಾಕಬೇಕೆಂದು ನಿರ್ಧರಿಸಿದ ವೈದ್ಯರು ಅರಿವಳಿಕೆ ನೀಡಿದ್ದರು.

ಅರಿವಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಮಗು ಪ್ರಜ್ಞೆ ಕಳೆದುಕೊಂಡಿದ್ದು, ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನಲ್ಲಿರುವ ಆಸ್ಪತ್ರೆಯ ಮತ್ತೊಂದು ಸುಧಾರಿತ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಸತತ ಐದು ದಿನಗಳ ಕಾಲ ವೆಂಟಿಲೇಟರ್ ಮೇಲಿದ್ದ ಮಗು, ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದೆ.

ಮಗುವಿಗೆ ಅರಿವಳಿಕೆಯ ಅತಿಯಾದ ಡೋಸ್ ನೀಡಿದ್ದರಿಂದಲೇ ಮಗುವಿನ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದೆ ಎಂದು ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪಯ್ಯನ್ನೂರು ಪೊಲೀಸರು ಆಸ್ಪತ್ರೆಯ ಅರಿವಳಿಕೆ ತಜ್ಞರಾದ ಡಾ. ಅಂಜಲಿ ಪೊದುವಾಳ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125ರ ಅಡಿಯಲ್ಲಿ (ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ನಿರ್ಲಕ್ಷ್ಯದ ಕೃತ್ಯ) ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!