


ಮಂಗಳೂರು : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟುವಿನಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ (ಅ. 27) ಬೆಳಕಿಗೆ ಬಂದಿದೆ.
ಮೃತರನ್ನು ಹೊಸಬೆಟ್ಟು ನಿವಾಸಿ ಸೋಮನಾಥ (48 ವರ್ಷ) ಎಂದು ಗುರುತಿಸಲಾಗಿದೆ. ಇವರು ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಇತ್ತೀಚೆಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಮದ್ಯಪಾನದ ಚಟ ಹೊಂದಿದ್ದರು ಎಂದು ತಿಳಿದುಬಂದಿದೆ.
ದೂರುದಾರರು ಸುರತ್ಕಲ್ ನಿವಾಸಿ ನೀಲಾಧರ (58 ವರ್ಷ). ಇವರು ಮೃತ ಸೋಮನಾಥ ಅವರ ಭಾವ, ಅಂದರೆ ಅಕ್ಕನ ಗಂಡ ಆಗಿದ್ದಾರೆ.ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ದೂರುದಾರರ ಸಂಬಂಧಿ ಗಿರೀಶ್ ಎಂಬವರು ಕರೆ ಮಾಡಿ, ಸೋಮನಾಥ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯವನ್ನು ತಿಳಿಸಿದ್ದಾರೆ. ಕೂಡಲೇ ದೂರುದಾರರು ಮನೆಗೆ ತೆರಳಿ ನೋಡಿದಾಗ, ಸೋಮನಾಥ ಅವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.ಸ್ಥಳದಲ್ಲಿ ಒಂದು ಚೀಟಿ ಪತ್ತೆಯಾಗಿದೆ. ಆ ಚೀಟಿಯಲ್ಲಿ ತನ್ನ ಸಾವಿಗೆ ತಾನೇ ಕಾರಣ, ತಾನು ಮಾಡಿದ ತಪ್ಪಿಗೆ ತಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಅಕ್ಟೋಬರ್ 25 ರಂದು ರಾತ್ರಿ ಹೊಸಬೆಟ್ಟು ಮೀನು ಜೆಟ್ಟಿ ಬಳಿ ಯುವತಿಯೊಬ್ಬರಿಗೆ ಸ್ನೇಹಿತರ ಜೊತೆಗಿದ್ದಾಗ ಅಮಲು ಪದಾರ್ಥ ಸೇವಿಸಿ ಅವಾಚ್ಯವಾಗಿ ಬೈದು ಅಡ್ಡಿಪಡಿಸಿದ ಆರೋಪದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಕ್ಷೆಯು ಮೂರು ವರ್ಷಕ್ಕಿಂತ ಕಡಿಮೆ ಇರುವುದರಿಂದ ಆರೋಪಿಗೆ ನೋಟಿಸ್ ನೀಡಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.ಠಾಣಾ ಜಾಮೀನು ಪಡೆದು ಮನೆಗೆ ಬಂದಿದ್ದ ಸೋಮನಾಥ ಅವರು ಅದೇ ಬೇಸರದಲ್ಲಿ ಅಕ್ಟೋಬರ್ 27 ರ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬರ್ 49/2026, ಕಲಂ 194-BNS ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.








