



ನಟಿ ನಯನತಾರಾ ಅವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಕನ್ನಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ನಯನತಾರಾ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಿದ್ದು, ನಟಿ ಕಿಯಾರಾ ಅಡ್ವಾಣಿ ಕೂಡ ಭರ್ಜರಿ ಸಂಭಾವನೆ ಪಡೆದಿದ್ದಾರೆ.
ರಾಕಿಂಗ್ ಸ್ಟಾರ್’ ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಗೆ ಸಜ್ಜಾಗುತ್ತಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೌತ್ ಸಿನಿರಂಗದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರಿಗೆ ಕೈತುಂಬ ಸಂಭಾವನೆ ನೀಡಲಾಗಿದೆ.
ಮಾಹಿತಿಯ ಪ್ರಕಾರ, ನಯನತಾರಾ ಅವರು ‘ಟಾಕ್ಸಿಕ್’ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದು ಅವರ ಸುದೀರ್ಘ ಸಿನಿ ಕೆರಿಯರ್‌ನಲ್ಲೇ ಅತ್ಯಂತ ದೊಡ್ಡ ಮೊತ್ತದ ಪೇ-ಚೆಕ್‌ಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ನಲ್ಲಿ ಕೂಡ ನಯನತಾರಾ ಅವರಿಗೆ ಜನಪ್ರಿಯತೆ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಇಷ್ಟು ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.
15 ಕೋಟಿ ಡಿಮ್ಯಾಂಡ್ ಮಾಡಿದ್ದ ನಯನತಾರಾ:
ವರದಿಗಳ ಪ್ರಕಾರ, ನಯನತಾರಾ ಅವರು ಆರಂಭದಲ್ಲಿ ಈ ಪ್ರಾಜೆಕ್ಟ್‌ಗೆ ಸಹಿ ಹಾಕಲು ಬರೋಬ್ಬರಿ 15 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದರಂತೆ. ಆದರೆ ಚಿತ್ರದ ನಿರ್ಮಾಪಕರು ಹಾಗೂ ನಟಿಯ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳ ನಂತರ, ಕೊನೆಗೆ 12 ಕೋಟಿ ರೂಪಾಯಿಗೆ ಡೀಲ್ ಫೈನಲ್ ಆಯಿತು ಎಂದು ಹೇಳಲಾಗುತ್ತಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ ಅವರ ಪಾತ್ರಕ್ಕೆ ಅತಿ ಹೆಚ್ಚು ಸ್ಕ್ರೀನ್ ಟೈಮ್ ಇಲ್ಲ. ಚಿತ್ರದಲ್ಲಿ ಅವರದ್ದು ಪ್ರಮುಖ ಪಾತ್ರವಾದರೂ ಅದು ಅತಿ ದೀರ್ಘವಾಗಿ ಇರುವುದಿಲ್ಲ ಎನ್ನಲಾಗಿದೆ. ಅವರ ಸ್ಟಾರ್ ವ್ಯಾಲ್ಯೂ ಮತ್ತು ಕಥೆಗೆ ಇರುವ ಪ್ರಾಮುಖ್ಯತೆಯನ್ನು ಪರಿಗಣಿಸಿ ಚಿತ್ರತಂಡ ಅವರಿಗೆ ಇಷ್ಟು ದೊಡ್ಡ ಮೊತ್ತವನ್ನು ನೀಡಲು ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ.







