
ಹೊಸದಿಲ್ಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣ ಸರಸ್ವತಿ ದೇವಿಗೆ ಸಮರ್ಪಿತ ದೇವಸ್ಥಾನವಾಗಿದೆ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಹುಝೇಫಾ ಅಹ್ಮದಿ ಮತ್ತು ವಕೀಲ ನಿಝಾಮ್ ಪಾಶಾ ಅವರು ಈ ಅರ್ಜಿಗಳನ್ನು ತುರ್ತು ವಿಚಾರಣೆ ನಡೆಸಬೇಕಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಕಲ್ಯಾ ಬಾಗ್ನಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರಿಗೆ ಅರ್ಜಿಗಳಲ್ಲಿನ ಲೋಪದೋಷಗಳನ್ನು ನಿವಾರಿಸುವಂತೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿಗಳು ಶೀಘ್ರದಲ್ಲೇ ಅರ್ಜಿಗಳನ್ನು ವಿಚಾರಣೆಗೆ ಪೀಠದ ಮುಂದೆ ಪಟ್ಟಿ ಮಾಡಲಾಗುವುದು ಎಂದು ಭರವಸೆ ನೀಡಿದರು.ಮೇ 15ರಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ ಕಮಲ್ ಮೌಲಾ ಮಸೀದಿ ಸಂಕೀರ್ಣ ಸರಸ್ವತಿ ದೇವಿಗೆ ಸಮರ್ಪಿತವಾದ ದೇವಸ್ಥಾನವಾಗಿದೆ ಎಂದು ತೀರ್ಪು ನೀಡಿತ್ತು.








