Tuesday, July 21, 2026
spot_imgspot_img
spot_imgspot_img

ಭಾರತಕ್ಕೆ ಮೊದಲ ಡೆಂಗ್ಯೂ ಲಸಿಕೆ ‘QDENGA’ಗೆ ಅನುಮೋದನೆ

- Advertisement -
- Advertisement -

ನವದೆಹಲಿ: ಡೆಂಗ್ಯೂ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದ್ದು, ದೇಶದಲ್ಲೇ ಮೊದಲ ಬಾರಿಗೆ ಡೆಂಗ್ಯೂ ತಡೆಗಟ್ಟುವ QDENGA ಲಸಿಕೆಗೆ ಭಾರತೀಯ ಔಷಧ ಮಹಾನಿಯಂತ್ರಕರು ಅನುಮೋದನೆ ನೀಡಿದೆ.

ಜಪಾನ್ ಮೂಲದ ಬಯೋಫಾರ್ಮಾ ಕಂಪನಿ ಟಕೇಡಾ ಅಭಿವೃದ್ಧಿಪಡಿಸಿರುವ ಈ ಲಸಿಕೆ 4 ರಿಂದ 60 ವರ್ಷದೊಳಗಿನವರಿಗೆ ನೀಡಲು ಅನುಮತಿ ಸಿಕ್ಕಿದೆ. ಇದರಿಂದ ಭಾರತಕ್ಕೆ ಮೊದಲ ಡೆಂಗ್ಯೂ ಲಸಿಕೆ ಅಧಿಕೃತವಾಗಿ ಲಭ್ಯವಾಗಿದೆ.

ಡೆಂಗ್ಯೂ ಮೊದಲು ಬಂದಿದ್ದರೂ ಅಥವಾ ಬರದಿದ್ದರೂ ಈ ಲಸಿಕೆ ಪಡೆಯಬಹುದು. ವಿಶೇಷವೆಂದರೆ, ಲಸಿಕೆ ನೀಡುವ ಮೊದಲು ಡೆಂಗ್ಯೂ ಪರೀಕ್ಷೆ ಮಾಡಿಸಬೇಕಾದ ಅಗತ್ಯ ಇಲ್ಲ. ಇದರಿಂದ ಸಾಮಾನ್ಯ ಜನರಿಗೆ ಲಸಿಕೆ ಪಡೆಯುವುದು ಇನ್ನಷ್ಟು ಸುಲಭವಾಗಲಿದೆ.

QDENGA ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ಬಳಿಕ ಮೂರು ತಿಂಗಳ ಅಂತರದಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ. ಈ ಲಸಿಕೆ ಡೆಂಗ್ಯೂ ವೈರಸ್‌ನ ಎಲ್ಲಾ ನಾಲ್ಕು ರೂಪಗಳ ವಿರುದ್ಧ ರಕ್ಷಣೆ ನೀಡುವಂತೆ ಅಭಿವೃದ್ಧಿಪಡಿಸಲಾಗಿದೆ.

ಲಸಿಕೆಗೆ ಅನುಮೋದನೆ ನೀಡುವ ಮೊದಲು 19 ಹಂತಗಳ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದ್ದು, ವಿಶ್ವದ ವಿವಿಧ ದೇಶಗಳ 28 ಸಾವಿರಕ್ಕೂ ಹೆಚ್ಚು ಜನರು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಭಾರತದಲ್ಲೂ 4 ರಿಂದ 60 ವರ್ಷದವರ ಮೇಲೆ ಮೂರನೇ ಹಂತದ ಪರೀಕ್ಷೆ ನಡೆಸಿ, ಲಸಿಕೆಯ ಸುರಕ್ಷತೆ ಮತ್ತು ಪರಿಣಾಮವನ್ನು ಪರಿಶೀಲಿಸಲಾಗಿದೆ.

2022ರಿಂದ ಈವರೆಗೆ 43 ದೇಶಗಳಲ್ಲಿ ಈ ಲಸಿಕೆಗೆ ಅನುಮೋದನೆ ಸಿಕ್ಕಿದ್ದು, ವಿಶ್ವದಾದ್ಯಂತ 3.2 ಕೋಟಿಗೂ ಹೆಚ್ಚು ಡೋಸ್‌ಗಳನ್ನು ವಿತರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಡೆಂಗ್ಯೂ ಹೆಚ್ಚಿರುವ ಪ್ರದೇಶಗಳಲ್ಲಿ QDENGA ಲಸಿಕೆ ಬಳಸುವಂತೆ ಶಿಫಾರಸು ಮಾಡಿದೆ. ಈ ಲಸಿಕೆಗೆ WHO ಪ್ರೀಕ್ವಾಲಿಫಿಕೇಶನ್ ಕೂಡ ದೊರೆತಿದ್ದು, ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!