Saturday, September 5, 2026
spot_imgspot_img
spot_imgspot_img

ವಿಟ್ಲ ಗ್ರಾಮೀಣ ಸಹಕಾರಿ ಸಂಘದಲ್ಲಿ ಉದ್ಯೋಗಾವಕಾಶ: ದ್ವಿತೀಯ ದರ್ಜೆ ಸಹಾಯಕ ಹಾಗೂ ಜವಾನ ಸೇರಿ 9 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

- Advertisement -
- Advertisement -

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಂಘದ ಸಿಬ್ಬಂದಿ ನೇಮಕಾತಿ ಉಪಸಮಿತಿಯ ಆದೇಶದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.

ಪ್ರಕಟಣೆಯ ಪ್ರಕಾರ, ದ್ವಿತೀಯ ದರ್ಜೆ ಸಹಾಯಕ ಹುದ್ದೆ 6 ಹಾಗೂ ಜವಾನ ಹುದ್ದೆ 3 ಸೇರಿದಂತೆ ಒಟ್ಟು 9 ಹುದ್ದೆಗಳು ಭರ್ತಿಯಾಗಲಿವೆ.
ಈ ಹುದ್ದೆಗಳಿಗೆ ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಸಂಘದ ಕಾರ್ಯವ್ಯಾಪ್ತಿಯ ವ್ಯಾಪ್ತಿಯಲ್ಲಿರುವ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಹೊಂದಿರಬೇಕು. ಅಭ್ಯರ್ಥಿಗಳು ಕನ್ನಡವನ್ನು ಓದಲು, ಬರೆಯಲು ಹಾಗೂ ಸ್ಪಷ್ಟವಾಗಿ ಮಾತನಾಡಲು ಬಲ್ಲವರಾಗಿರಬೇಕು. ಜೊತೆಗೆ ಕಂಪ್ಯೂಟರ್ ಡಿಪ್ಲೊಮಾ ಅಥವಾ ಕಂಪ್ಯೂಟರ್ ಅಪ್ಲಿಕೇಷನ್ ಜ್ಞಾನ ಕಡ್ಡಾಯವಾಗಿದೆ. ಈ ಹುದ್ದೆಗೆ ₹34,100 ರಿಂದ ₹67,600 ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

ಜವಾನ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಈ ಹುದ್ದೆಗೆ ₹27,000 ರಿಂದ ₹46,675 ವೇತನ ಶ್ರೇಣಿ ನಿಗದಿಯಾಗಿದೆ.ವಯೋಮಿತಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಹಿಂದುಳಿದ ವರ್ಗಗಳ (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ 38 ವರ್ಷ, ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ನಿಬಂಧನೆಗಳು :

1) ಸಂಘದ ಕಾರ್ಯವ್ಯಾಪ್ತಿಯ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ರ ನೀಡಲಾಗುವುದು.

2) ವಯೋಮಿತಿ : ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಹಿಂದುಳಿದ ವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ.

3) ಅರ್ಜಿದಾರರು ನಿಗದಿತ ಅರ್ಜಿ ನಮೂನೆಯನ್ನು ಸಂಘದ ವೆಬ್‌ ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಂಡು ದಿನಾಂಕ 27-07-2026ನೇ ಸೋಮವಾರ ಸಂಜೆ 4.00 ಗಂಟೆಯ ಒಳಗೆ ಸಲ್ಲಿಸತಕ್ಕದ್ದು. ಅರ್ಜಿ ಶುಲ್ಕವನ್ನು ಸಂಘದ ಶಾಖಾ ಕಛೇರಿ ಅಥವಾ ಪ್ರಧಾನ ಕಛೇರಿ ವಿಟ್ಲದಲ್ಲಿ ಪಾವತಿಸಿ ಅರ್ಜಿಯೊಂದಿಗೆ ಚಲನ್ ಪ್ರತಿಯನ್ನು ಲಗತ್ತೀಕರಿಸತಕ್ಕದ್ದು.

4) ಅರ್ಜಿ ಫಾರಂಗಳನ್ನು ಅಭ್ಯರ್ಥಿಯು ಸ್ವಹಸ್ತಾಕ್ಷರದಲ್ಲಿಯೇ ಭರ್ತಿ ಮಾಡತಕ್ಕದ್ದು.

5) ಡಿ.ಸಿ.ಎಂ/ಜಿ.ಡಿ.ಸಿ/ಹೆಚ್.ಡಿ.ಸಿ.ಎಂ ತರಬೇತಿ ಪಡೆದವರಿಗೆ ಹಾಗೂ ಸಹಕಾರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿರುವರಿಗೆ ಆದ್ಯತೆ ನೀಡಲಾಗುವುದು, ಈ ಬಗ್ಗೆ ಕಡ್ಡಾಯವಾಗಿ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಲಗತ್ತಿಸತಕ್ಕದ್ದು.

6) ವಿದ್ಯಾರ್ಹತೆ, ವಯಸ್ಸು, ಜಾತಿ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸುವುದು. ಹಾಗೂ ಎಲ್ಲಾ ಪ್ರತಿಗಳಿಗೆ ಕಡ್ಡಾಯವಾಗಿ ಸ್ವಯಂ ದೃಢೀಕರಣ ಮಾಡಿ ಅರ್ಜಿ ಸಲ್ಲಿಸುವುದು. ದಾಖಲಾತಿಗಳು ಸ್ವಯಂ ದೃಢೀಕರಣಗೊಳ್ಳದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

7) ಭರ್ತಿ ಮಾಡಿದ ಅರ್ಜಿಯನ್ನು ಕಡ್ಡಾಯವಾಗಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸತಕ್ಕದ್ದು.

8) ನಿಗದಿತ ಅರ್ಜಿ ಶುಲ್ಕ :

ಎ) ದ್ವಿತೀಯ ದರ್ಜೆ ಸಹಾಯಕ: ಸಾಮಾನ್ಯ / ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ. 1000.00 (ಜಿ.ಎಸ್.ಟಿ ಸೇರಿ) ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ. 500.00 (ಜಿ.ಎಸ್.ಟಿ ಸೇರಿ)

ಬಿ) ಜವಾನ ಹುದ್ದೆ : ಸಾಮಾನ್ಯ / ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ. 500.00 (ಜಿ.ಎಸ್.ಟಿ ಸೇರಿ) ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ. 250.00(ಜಿ.ಎಸ್.ಟಿ ಸೇರಿ)

9) ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನವು ಸಂಘದ ಆಡಳಿತ ಮಂಡಳಿಯದ್ದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಘದ ವೆಬ್‌ಸೈಟ್ ಅಥವಾ ಕಛೇರಿ ಸಮಯದಲ್ಲಿ ಸಂಘದ ಪ್ರಧಾನ ಕಛೇರಿಯನ್ನು ಸಂಪರ್ಕಿಸಬಹುದು.

- Advertisement -

Related news

error: Content is protected !!