
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಮೃಗಾಲಯವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.
ಪಿಲಿಕುಳ ಜೈವಿಕ ಉದ್ಯಾನದ ಬಳಿ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ ‘ಪೀಪಲ್ ಫಾರ್ ಎಥಿಕಲ್ ಟ್ರೇಟೆಂಟ್ ಆಫ್ ಅನಿಮಲ್ (ಪೆಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ರಾಜ್ಯ ಸರಕಾರದ ಪರ ಹಾಜರಾದ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಪಿಲಿಕುಳ ಮೃಗಾಲಯವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗುವುದು, ನಿರ್ವಹಣೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಮೃಗಾಲಯ ಪ್ರಾಧಿಕಾರದ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಮೃಗಾಲಯದಲ್ಲಿರುವ 652 ಪ್ರಾಣಿಗಳ ಸುರಕ್ಷತೆ ಮತ್ತು ಕಾಳಜಿ ಸರಕಾರದ ಆದ್ಯತೆಯಾಗಿದೆ ಎಂದರು.ಇದಕ್ಕೆ ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರದ ಪರ ವಕೀಲರು, ಪಿಲಿಕುಳ ಮೃಗಾಲಯವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿದರೆ ನಮ್ಮದೇನು ಅಭ್ಯಂತರವಿಲ್ಲ ಎಂದರು.ಇದನ್ನು ಆಲಿಸಿದ ನ್ಯಾಯಪೀಠ, ಮೃಗಾಯಲಯ ವರ್ಗಾವಣೆ ಪ್ರಕ್ರಿಯೆ ಹೇಗಿರಲಿದೆ,
ವರ್ಗಾವಣೆಯು ಕೇವಲ ಮೃಗಾಲಯ ಇರುವ ಸೀಮಿತ ಭೌಗೋಳಿಕ ಪ್ರದೇಶ ಮತ್ತು ಪ್ರಾಣಿಗಳಿಗೆ ಮಾತ್ರ ಸಿಮೀತವಾಗಿರಲಿದೆಯೇ? ಒಟ್ಟಾರೆ ಜೈವಿಕ ಉದ್ಯಾನವನದ ವಿಚಾರ ಏನಾಗಲಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.







