


ತಿರುವನಂತಪುರ: ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಅವರನ್ನು ಇಲ್ಲಿನ ಅವರ ನಿವಾಸದಿಂದ ವಿಶೇಷ ತನಿಖಾ ತಂಡ ಗುರುವಾರ ವಶಕ್ಕೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
TDB ಮಾಜಿ ಸದಸ್ಯ ಅಜಿ ಕುಮಾರ್ ಮತ್ತು ತಿರುವಾಭರಣ ಕಮಿಷನರ್ ಆರ್. ರೆಜಿಲಾಲ್ ಅವರನ್ನು ಕೂಡ SIT ವಿಚಾರಣೆ ನಡೆಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. 2019ರಲ್ಲಿ ಶಬರಿಮಲೆ ದೇವಸ್ಥಾನದ ಶ್ರೀಕೋವಿಲ್ ನ ದ್ವಾರಪಾಲಕ ವಿಗ್ರಹಗಳು ಮತ್ತು ಬಾಗಿಲ ಚೌಕಟ್ಟುಗಳನ್ನು ಚಿನ್ನದ ಲೇಪನಕ್ಕಾಗಿ ಒಯ್ದ ಬಳಿಕ ನಡೆದಿದೆ ಎನ್ನಲಾದ ಚಿನ್ನದ ಕಳವಿಗೆ ಸಂಬಂಧಿಸಿದ ಎರಡು ಪ್ರಕರಣಗಳ ತನಿಖೆಯನ್ನು SIT ನಡೆಸುತ್ತಿದೆ.
ಪ್ರಶಾಂತ್ TDB ಅಧ್ಯಕ್ಷರಾಗಿದ್ದಾಗ, 2025ರಲ್ಲಿ ನಡೆಸಲಾಗಿದ್ದ ಇದೇ ರೀತಿಯ ಚಿನ್ನದ ಲೇಪನದ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು SIT ಇತ್ತೀಚೆಗೆ ಕೇರಳ ಹೈಕೋರ್ಟ್ಗೆ ತಿಳಿಸಿತ್ತು.
ಪ್ರಶಾಂತ್ 2023ರಿಂದ 2025ರವರೆಗೆ TDB ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಿಪಿಎಂ ಜೊತೆ ಗುರುತಿಸಿಕೊಳ್ಳುವ ಮೊದಲು ಅವರು ಕಾಂಗ್ರೆಸ್ ನಾಯಕರಾಗಿದ್ದರು. ವಶಕ್ಕೆ ಪಡೆಯುವ ಕೆಲವೇ ಕ್ಷಣಗಳ ಮೊದಲು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಪ್ರಶಾಂತ್, ತಮ್ಮ ಬಂಧನದ ಭೀತಿ ವ್ಯಕ್ತಪಡಿಸಿದ್ದು, ಈ ಕ್ರಮವು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು.








