
ಬೆಂಗಳೂರು: ರಾಜ್ಯದಲ್ಲಿನ ಹೋಂಸ್ಟೇ ಹಾಗೂ ಬೆಡ್ & ಬ್ರೇಕ್‌ಫಾಸ್ಟ್ (B&B) ವಸತಿ ವ್ಯವಸ್ಥೆಗಳನ್ನು ಪ್ರತ್ಯೇಕ ವರ್ಗಗಳಾಗಿ ಗುರುತಿಸಿ, ಪ್ರವಾಸಿಗರ ವಸತಿ ವ್ಯವಸ್ಥೆಯನ್ನು ಹೆಚ್ಚು ವೃತ್ತಿಪರ ಹಾಗೂ ಸುರಕ್ಷಿತವಾಗಿಸಲು ಪ್ರವಾಸೋದ್ಯಮ ಇಲಾಖೆ ‘ಕರ್ನಾಟಕ ಹೋಂಸ್ಟೇ ನೋಂದಣಿ ಮಾರ್ಗಸೂಚಿ–2025’ ಅನ್ನು ಜಾರಿಗೊಳಿಸಿದೆ.ಹೊಸ ಮಾರ್ಗಸೂಚಿಗಳ ಪ್ರಕಾರ, ಮಾಲಕರು ಅಥವಾ ಅವರ ಕುಟುಂಬದವರು ವಾಸಿಸುವ ಖಾಸಗಿ ಮನೆಯಲ್ಲಿ ಒಂದು ಕೊಠಡಿಯಿಂದ ಗರಿಷ್ಠ ಆರು ಕೊಠಡಿಗಳವರೆಗೆ ಪ್ರವಾಸಿಗರಿಗೆ ವಸತಿ ನೀಡುವ ವ್ಯವಸ್ಥೆಯನ್ನು ಹೋಂಸ್ಟೇ ಎಂದು ಪರಿಗಣಿಸಲಾಗಿದ್ದು, ಇದನ್ನು ವಾಣಿಜ್ಯೇತರ ಚಟುವಟಿಕೆಯಾಗಿ ವರ್ಗೀಕರಿಸಲಾಗಿದೆ.ಇನ್ನೊಂದೆಡೆ, ಬೆಡ್ & ಬ್ರೇಕ್‌ಫಾಸ್ಟ್ (B&B) ವ್ಯವಸ್ಥೆಯಲ್ಲಿ ಆಸ್ತಿ ಮಾಲಕರು ಸ್ವತಃ ವಾಸಿಸುವುದಿಲ್ಲ.
ಅವರ ಪರವಾಗಿ ನಿಯೋಜಿತ ನಿರ್ವಾಹಕರು ಅಥವಾ ಏಜೆಂಟ್‌ಗಳು ಸ್ಥಳದಲ್ಲೇ ವಾಸವಿದ್ದು, ಅತಿಥಿಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಾರೆ. ಈ ವ್ಯವಸ್ಥೆಯಲ್ಲಿ ಗರಿಷ್ಠ 6 ಕೊಠಡಿಗಳು ಅಥವಾ 12 ಬೆಡ್‌ಗಳನ್ನು ನಿರ್ವಹಿಸಲು ಅವಕಾಶವಿದ್ದು, ಇದನ್ನು ವಾಣಿಜ್ಯ ಚಟುವಟಿಕೆಯಾಗಿ ಪರಿಗಣಿಸಲಾಗಿದೆ.ಈ ಹೊಸ ನೀತಿಯಿಂದ ಪ್ರವಾಸಿಗರು ತಾವು ಆಯ್ಕೆ ಮಾಡುತ್ತಿರುವ ವಸತಿ ವ್ಯವಸ್ಥೆಯ ಸ್ವರೂಪವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದ್ದು, ಹೋಂಸ್ಟೇ ಮತ್ತು B&B ಘಟಕಗಳನ್ನು ಅವುಗಳ ಕಾರ್ಯವೈಖರಿಯ ಆಧಾರದ ಮೇಲೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ಇಲಾಖೆಗೆ ಅನುಕೂಲವಾಗಲಿದೆ.
ಜೊತೆಗೆ, ಖಾಸಗಿ ಆಸ್ತಿ ಮಾಲಕರು ಹಾಗೂ ಪ್ರವಾಸೋದ್ಯಮ ಉದ್ಯಮಿಗಳಿಗೆ ನಿಯಮಬದ್ಧವಾಗಿ ಈ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ವಿಶೇಷವಾಗಿ ಹೋಟೆಲ್‌ಗಳ ಕೊರತೆ ಇರುವ ಪ್ರವಾಸಿ ತಾಣಗಳಲ್ಲಿ ಈ ನೀತಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಪ್ರವಾಸೋದ್ಯಮ ಇಲಾಖೆ ನೋಂದಾಯಿತ ವಸತಿ ಘಟಕಗಳಲ್ಲಿ ನೋಂದಣಿ ಪ್ರಮಾಣಪತ್ರ ಪ್ರದರ್ಶನ, ಅತಿಥಿಗಳ ದಾಖಲೆ ನಿರ್ವಹಣೆ, ಸಿಬ್ಬಂದಿಯ ಪೊಲೀಸ್ ಪರಿಶೀಲನೆ, ತುರ್ತು ಪರಿಸ್ಥಿತಿ ನಿರ್ವಹಣೆ ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಿದೆ. ಇದರಿಂದ ಪ್ರವಾಸಿಗರ ಸುರಕ್ಷತೆ ಮತ್ತು ವಿಶ್ವಾಸ ಇನ್ನಷ್ಟು ಹೆಚ್ಚಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.








