Saturday, August 1, 2026
spot_imgspot_img
spot_imgspot_img

ನಿಂದಿಸಿದವರನ್ನು ಕ್ಷಮಿಸಲು ಬಯಸುತ್ತೇನೆ; ಶಿಕ್ಷಿಸುವುದಕ್ಕಿಂತ ಸರಿಯಾದ ಮಾರ್ಗದರ್ಶನ ನೀಡಿ- ಪ್ರಧಾನಿ ಮೋದಿ

- Advertisement -
- Advertisement -

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ ನಿಂದನಾತ್ಮಕ ಹೇಳಿಕೆಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

“ಇಂದು ನಿಮ್ಮೊಂದಿಗೆ ಮನಬಿಚ್ಚಿ ಮಾತನಾಡಬೇಕು ಎನಿಸಿತು. ಜಂತರ್ ಮಂತರ್‌ನಲ್ಲಿ ಏನಾಯಿತು ಎಂಬುದನ್ನು ದೇಶ ಮತ್ತು ಜಗತ್ತು ನೋಡಿದೆ. ಕೆಲವು ಕಿಡಿಗೇಡಿ ಮಕ್ಕಳು ನಾಗರಿಕ ಸಮಾಜಕ್ಕೆ ಒಪ್ಪದಂತಹ ಅತ್ಯಂತ ಅಸಭ್ಯ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆ. ನನ್ನನ್ನು ವೈಯಕ್ತಿಕವಾಗಿ ನಿಂದಿಸಲಾಯಿತು, ಅಷ್ಟೇ ಅಲ್ಲದೆ ನನ್ನ ದಿವಂಗತ ತಾಯಿಯನ್ನೂ ಬಿಡದೆ ನಿಂದಿಸಲಾಯಿತು. ನಮ್ಮ ಹೆಣ್ಣುಮಕ್ಕಳು ಇಂತಹ ಭಾಷೆ ಬಳಸಿರುವುದು ಇಡೀ ಸಮಾಜಕ್ಕೆ ಸಾಂಸ್ಕೃತಿಕ ಆಘಾತ ತಂದಿದೆ” ಎಂದು ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

“ಬಾಲ್ಯದಲ್ಲಿ ತಪ್ಪುಗಳು ನಡೆಯುವುದು ಸಹಜ, ಅದೇ ರೀತಿ ಆ ತಪ್ಪುಗಳನ್ನು ತಿದ್ದುಕೊಳ್ಳಲು ಬಾಲ್ಯದಲ್ಲೇ ಅವಕಾಶವೂ ಸಿಗುತ್ತದೆ. ಹೀಗಾಗಿ ಸಮಾಜದಲ್ಲಿ ಉಂಟಾಗಿರುವ ಆಕ್ರೋಶವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಈಗ ನಾವು ಆ ಮಕ್ಕಳನ್ನು ಅಪ್ಪಿಕೊಂಡು ಅವರಿಗೆ ಸರಿಯಾದ ದಾರಿಯನ್ನು ತೋರಿಸಬೇಕಾದ ಸಮಯ ಬಂದಿದೆ. ಅವರು ದಾರಿ ತಪ್ಪಿದ್ದಾರೆ, ಅವರನ್ನು ಸರಿಯಾದ ಹಾದಿಗೆ ತರುವುದು ನಮ್ಮ ಕರ್ತವ್ಯ” ಎಂದಿದ್ದಾರೆ.

ಸಮಾಜ ಮತ್ತು ಕೋರ್ಟ್‌ ಪ್ರಕ್ರಿಯೆಗಳ ಕುರಿತು ಪ್ರಧಾನಿ ಮಾತನಾಡಿ, “ಅವರನ್ನು ಶಿಕ್ಷಿಸುವುದು, ಕೋರ್ಟ್‌ ಮೆಟ್ಟಿಲೇರಿಸುವುದು ಅಥವಾ ಸಮಾಜದಲ್ಲಿ ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ಇದನ್ನು ಸ್ವೀಕರಿಸಬೇಕು. ಕೆಲವೊಮ್ಮೆ ನಮ್ಮ ನಾಲಿಗೆ ಹಲ್ಲಿನ ನಡುವೆ ಸಿಲುಕಿ ರಕ್ತ ಬರುತ್ತದೆ, ಹಾಗೆಂದು ನಾವು ಹಲ್ಲನ್ನು ಮುರಿದುಕೊಳ್ಳುವುದಿಲ್ಲವಲ್ಲ. ಏಕೆಂದರೆ ಹಲ್ಲು ಮತ್ತು ನಾಲಿಗೆ ಎರಡೂ ನಮ್ಮದೇ. ಅದೇ ರೀತಿ ಈ ಮಕ್ಕಳೂ ಸಹ ನಮ್ಮವರೇ” ಎಂದು ಭಾವುಕ ನಿದರ್ಶನ ನೀಡಿದ್ದಾರೆ.

“ದಾರಿ ತಪ್ಪಿದ ಯುವಜನತೆಗೆ ನೇರ ಕರೆ ನೀಡಿದ ಪ್ರಧಾನಿ, “ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವುದು ಕಷ್ಟಕರ, ಆದರೆ ನಾವು ಆ ಕೆಲಸವನ್ನು ಮಾಡಲೇಬೇಕು. ಆದ್ದರಿಂದ ನಾನು ಈ ಮಕ್ಕಳಿಗೆ ಕರೆ ನೀಡುತ್ತಿದ್ದೇನೆ. , ದೇಶದ ಹಿತಕ್ಕಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ. ಹೊಸದನ್ನು ಕಲಿಯೋಣ, ಮಾಡಿದ ತಪ್ಪುಗಳಿಂದಲೂ ಪಾಠ ಕಲಿಯೋಣ. ದೇಶವು ವೇಗವಾಗಿ ಮುನ್ನಡೆಯುತ್ತಿದ್ದು, ನಿಮ್ಮ ಕನಸುಗಳನ್ನೂ ಈಡೇರಿಸಿಕೊಳ್ಳಿ. ನಾನು ನಿಮಗಾಗಿಯೇ ಜೀವಿಸುತ್ತಿದ್ದೇನೆ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನನ್ನನ್ನು ಮುಡಿಪಾಗಿಟ್ಟಿದ್ದೇನೆ” ಎಂದು ಹೇಳಿ ತಮ್ಮ ಮಾತು ಮುಗಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!