


ಹೊಸದಿಲ್ಲಿ: ಅಮೆರಿಕದಲ್ಲಿ ತಮ್ಮ ಉನ್ನತ ಶಿಕ್ಷಣಕ್ಕೆ ಬಳಸಿದ ಹಣದ ಮೂಲದ ಕುರಿತು ಎದ್ದಿರುವ ಪ್ರಶ್ನೆಗಳ ನಡುವೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬೋಸ್ಟನ್ ವಿಶ್ವವಿದ್ಯಾಲಯ ನೀಡಿದ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ಸಾಲದ ನೆರವಿನಿಂದಲೇ ವ್ಯಾಸಂಗ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿದ್ಯಾರ್ಥಿವೇತನ ಪತ್ರವನ್ನೂ ಅವರು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದಾರೆ.
ದೀಪ್ಕೆ ಅವರ ಕುಟುಂಬದ ಹಣಕಾಸಿನ ವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ RTI ಕಾರ್ಯಕರ್ತ ಅಮಿತ್ ತಿವಾರಿ, ಮಹಾರಾಷ್ಟ್ರ ಸರಕಾರ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ಸಲ್ಲಿಸಿದ ಬೆನ್ನಲ್ಲೇ ದೀಪ್ಕೆ ಈ ಸ್ಪಷ್ಟನೆ ನೀಡಿದ್ದಾರೆ.
ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದೀಪ್ಕೆ ಅಮೆರಿಕದಲ್ಲಿ ತಮ್ಮ ಶಿಕ್ಷಣದ ವೆಚ್ಚವನ್ನು ಕುಟುಂಬದ ಅಘೋಷಿತ ಆಸ್ತಿಪಾಸ್ತಿ ಅಥವಾ ಆದಾಯದಿಂದ ಭರಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದು, “ಬೋಸ್ಟನ್ ವಿಶ್ವವಿದ್ಯಾಲಯ ನೀಡಿದ ವಿದ್ಯಾರ್ಥಿ ವೇತನದಿಂದಲೇ ನನ್ನ ಶಿಕ್ಷಣದ ಬಹುಪಾಲು ವೆಚ್ಚ ಭರಿಸಲಾಗಿದೆ. ಉಳಿದ ವೆಚ್ಚಕ್ಕಾಗಿ ಶೈಕ್ಷಣಿಕ ಸಾಲ ಪಡೆದಿದ್ದೆ. ಆ ಸಾಲವನ್ನು ಈಗ ಮರುಪಾವತಿಸುತ್ತಿದ್ದೇನೆ’ ಎಂದು ಹೇಳಿದರು.
ಆಗಸ್ಟ್ 1ರಂದು ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಅವರು, ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ನಿವೃತ್ತ ಜೂನಿಯರ್ ಇಂಜಿನಿಯರ್ ಆಗಿರುವ ದೀಪ್ಕೆ ಅವರ ತಂದೆ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಆಸ್ತಿ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರಕಾರ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ತಿಂಗಳಿಗೆ ಸುಮಾರು 60,000ರಿಂದ 65,000 ರೂ. ವೇತನ ಪಡೆಯುತ್ತಿದ್ದ ಸರ್ಕಾರಿ ಉದ್ಯೋಗಿಯೊಬ್ಬರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೇಗೆ ಕಳುಹಿಸಿದರು ಎಂಬ ಪ್ರಶ್ನೆಯನ್ನು ತಿವಾರಿ ದೂರಿನಲ್ಲಿ ಎತ್ತಿಹಿಡಿದಿದ್ದಾರೆ.
ಸಿಜೆಪಿಯ ಮುಂದಿನ ಚಟುವಟಿಕೆಗಳಿಗೆ ಹಣಕಾಸು ಹೇಗೆ ಒದಗಿಸಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಿದ ದೀಪ್ಕೆ “ಮುಂದೆ ಪಕ್ಷದ ಚಟುವಟಿಕೆಗಳಿಗೆ ಕ್ರೌಡ್‌ಫಂಡಿಂಗ್ ಮೂಲಕ ಜನರಿಂದ ದೇಣಿಗೆ ಸಂಗ್ರಹಿಸುತ್ತೇವೆ. ಹಣಕಾಸಿನ ಎಲ್ಲ ವಿವರಗಳನ್ನು ಪಾರದರ್ಶಕವಾಗಿ ಬಹಿರಂಗಪಡಿಸುತ್ತೇವೆ” ಎಂದು ಹೇಳಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ಚಳವಳಿಗೆ ಸಾಮಾನ್ಯ ನಾಗರಿಕರಿಂದಲೇ ಹೆಚ್ಚಿನ ಬೆಂಬಲ ದೊರೆತಿತ್ತು ಎಂದು ಹೇಳಿ, “ಪ್ರತಿಭಟನೆಯ ಸಂದರ್ಭದಲ್ಲಿ ಜನರು ಸ್ವಯಂಪ್ರೇರಿತವಾಗಿ ಆಹಾರ ನೀಡಿದರು. ಹಲವರು ತಮ್ಮದೇ ನೀರಿನ ಬಾಟಲಿಗಳನ್ನು ತಂದು ಸಹಕಾರ ನೀಡಿದರು. ಚಳವಳಿ ಜನರ ಬೆಂಬಲದಿಂದಲೇ ಸಾಗಿತು” ಎಂದು ದೀಪ್ಕೆ ತಿಳಿಸಿದರು.








