Monday, August 3, 2026
spot_imgspot_img
spot_imgspot_img

ಖ್ಯಾತ ನಟಿ ಉಮಾಶ್ರೀ ವಿಧಾನಪರಿಷತ್ ಉಪಸಭಾಪತಿಯಾಗಿ ಆಯ್ಕೆ

- Advertisement -
- Advertisement -

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಉಮಾಶ್ರೀ ಅವರು ತಮ್ಮ ಮೂರು ದಶಕಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಇದೀಗ ವಿಧಾನಪರಿಷತ್ ನ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.

1957ರ ಮೇ 10ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಉಮಾಶ್ರೀ ಜನಿಸಿದ್ದರು. ಬಡತನದಲ್ಲೇ ಬೆಳೆದಿದ್ದ ಉಮಾಶ್ರೀ ಅವರು ವೃತ್ತಿ ರಂಗಭೂಮಿಯಲ್ಲಿ ಹಲವಾರು ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನು ನಿರ್ವಹಿಸಿ ರಂಗಭೂಮಿಯಲ್ಲಿ ಖ್ಯಾತಿ ಪಡೆದಿದ್ದರು. 1984ರಲ್ಲಿ ಕಾಶೀನಾಥ್ ನಿರ್ದೇಶನದ ಅನುಭವ ಸಿನಿಮಾದಲ್ಲಿ ಪೋಷಕ ಪಾತ್ರ ಮಾಡುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು. ತಮ್ಮ ಅಪ್ರತಿಮ ನಟನೆಗಾಗಿ ಉಮಾಶ್ರೀ ಅವರು ರಾಷ್ಟ್ರಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ನಟಿ ಉಮಾಶ್ರೀ ಅವರು 1994ರಲ್ಲಿ ಬಂಗಾರಪ್ಪನವರ ಕೆಸಿಪಿ ಪಕ್ಷದಿಂದ ರಾಜಕೀಯ ಪ್ರವೇಶಿಸಿ, ಅಂದು ಹುಬ್ಬಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಯಗೊಂಡಿದ್ದರು. 2001ರಲ್ಲಿ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 208ರವರೆಗೂ ವಿಧಾನಪರಿಷತ್ ಸದಸ್ಯೆಯಾಗಿದ್ದ ಅವರು, 2008ರಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮೂಲಕ ಸ್ಪರ್ಧಿಸಿ ಬಿಜೆಪಿಯ ಸಿದ್ದು ಸವದಿ ವಿರುದ್ಧ ಸೋತಿದ್ದರು.

ನಂತರ 2013ರಲ್ಲಿ ತೇರದಾಳ ಕ್ಷೇತ್ರದಲ್ಲಿ ಸಿದ್ದು ಸವದಿ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ 5 ವರ್ಷ ಕಾರ್ಯನಿರ್ವಹಿಸಿದ್ದರು. 2018ರ ಚುನಾವಣೆಯಲ್ಲಿ ಉಮಾಶ್ರೀ ಪರಾಜಯಗೊಂಡಿದ್ದರು. 2023ರಲ್ಲಿ ವಿಧಾನಪರಿಷತ್‌ ಸದಸ್ಯೆಯಾಗಿ ಆಯ್ಕೆಗೊಂಡಿದ್ದು, ಇದೀಗ ವಿಧಾನಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!