
ಹೊಸದಿಲ್ಲಿ: ಥಾಯ್ಲೆಂಡ್ ನ ಫುಕೆಟ್‌ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ AI2379 ವಿಮಾನವು ಸೋಮವಾರ ತೀವ್ರ ವಾಯು ಪ್ರಕ್ಷುಬ್ಧತೆ (ಟರ್ಬುಲೆನ್ಸ್‌ಗೆ ಸಿಲುಕಿದ್ದು, ಕೆಲಕಾಲ ಸುಮಾರು 300 ಅಡಿಗಳಷ್ಟು ಎತ್ತರ ಕಳೆದುಕೊಂಡ ಪರಿಣಾಮ ಸುಮಾರು 12 ಪ್ರಯಾಣಿಕರು ಹಾಗೂ ಕೆಲ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ವಿವಿಧ ವರದಿಗಳ ಪ್ರಕಾರ, ವಾಯು ಪ್ರಕ್ಷುಬ್ಧತೆ ಎದುರಾದಾಗ ವಿಮಾನವು ಏಕಾಏಕಿ ಸುಮಾರು 300 ಅಡಿಗಳಷ್ಟು ಕೆಳಕ್ಕೆ ಇಳಿದಿತ್ತು. ಇದರಿಂದ ವಿಮಾನದೊಳಗೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೆಲ ಪ್ರಯಾಣಿಕರು ಮತ್ತು ಸಿಬಂದಿಗೆ ಗಾಯಗಳಾಗಿವೆ.ವಿಮಾನವು ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಿಮಾನದಿಂದ ಇಳಿಸಲಾಯಿತು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ವಿಮಾನ ನಿಲ್ದಾಣದಲ್ಲಿನ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.ಘಟನೆಯಲ್ಲಿ ಗಾಯಗೊಂಡವರ ನಿಖರ ಸಂಖ್ಯೆಯನ್ನು ಏರ್ ಇಂಡಿಯಾ ಬಹಿರಂಗಪಡಿಸಿಲ್ಲ. ಆದರೆ, ಸುಮಾರು 12 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ನಮ್ಮ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮವೇ ಏರ್ ಇಂಡಿಯಾದ ಅತ್ಯುನ್ನತ ಆದ್ಯತೆಯಾಗಿದೆ. ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲಾಗುತ್ತಿದೆ. ಈ ಘಟನೆಯ ತನಿಖೆಯ ಭಾಗವಾಗಿ ಸಂಬಂಧಿತ ಅಧಿಕಾರಿಗಳೊಂದಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ” ಎಂದು ಏರ್ ಇಂಡಿಯಾ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








