Wednesday, July 22, 2026
spot_imgspot_img
spot_imgspot_img

ತಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇನೆಂದು ಸಂದೇಶ ರವಾನಿಸಿದ ಬಳಿಕ ನಾಪತ್ತೆಯಾದ ಜಾರ್ಖಂಡ್ ಮೂಲದ ವ್ಯಕ್ತಿ

- Advertisement -
- Advertisement -

ಹೊಸದಿಲ್ಲಿ: “ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇನೆ, ಜೈ ಮಾತಾ ದಿ” ಎಂದು ಸಂದೇಶ ರವಾನಿಸಿದ್ದ ಜಾರ್ಖಂಡ್ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಜನವರಿ 10ರಿಂದ ಸೌದಿ ಅರೇಬಿಯಾದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಈ ಸಂದೇಶ ರವಾನಿಸಿದ ವೇಳೆ ತಾನುಳಿದುಕೊಂಡಿದ್ದ ವಾಸ್ತವ್ಯದಿಂದ ಅವರು ಭಾರತಕ್ಕೆ ಮರಳಲು ಜಿದ್ದಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ವಿಮಾನ ನಿಲ್ದಾಣವನ್ನು ತಲುಪಿಯೇ ಇಲ್ಲ ಎಂದು ಕುಟುಂಬದ ಸದಸ್ಯರು ಶಂಕಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯನ್ನು ಜಾರ್ಖಂಡ್ ನ ಧನ್ ಬಾದ್ ಜಿಲ್ಲೆಯ ಸಿಂದ್ರಿ ಗ್ರಾಮದ ನಿವಾಸಿ ಚಂದ್ರಶೇಖರ್ ಕುಮಾರ್ ಎನ್ನಲಾಗಿದ್ದು, ಅವರು ಜುಲೈ 2025ರಲ್ಲಿ ಗುಜರಾತ್ ಮೂಲದ ನೇಮಕಾತಿ ಏಜೆಂಟ್ ಮೂಲಕ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಚಂದ್ರಶೇಖರ್ ಕುಮಾರ್ ಈ ಹಿಂದೆ ಸೌದಿ ಅರೇಬಿಯಾ ಹಾಗೂ ದುಬೈನಲ್ಲಿ ಉದ್ಯೋಗ ನಿರ್ವಹಿಸಿದ್ದು, ಅವರಿಗೆ ಆ ಪ್ರಾಂತ್ಯಗಳು ಪರಿಚಿತವಾಗಿವೆ ಎಂದು ಅವರ ಸೋದರಳಿಯ ಸಾಹಿಲ್ ಕುಮಾರ್ ತಿಳಿಸಿದ್ದಾರೆ.

ಸಾಹಿಲ್ ಕುಮಾರ್ ಪ್ರಕಾರ, ಜುಲೈ 24, 2025ರಂದು ಮುಂಬೈನಿಂದ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಿದ್ದ ಚಂದ್ರಶೇಖರ್ ಕುಮಾರ್, ಗುತ್ತಿಗೆ ಆಧಾರದಲ್ಲಿ ಅಲ್ ಝಮೀಲ್ ಮೆಟಲ್ ವರ್ಕ್ಸ್ ಫ್ಯಾಕ್ಟರಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು ಎನ್ನಲಾಗಿದೆ. ಆರಂಭದಲ್ಲಿ ಮೂರು ತಿಂಗಳ ವೀಸಾ ನೀಡಿದ್ದ ಕಂಪನಿಯು, ಬಳಿಕ, ಅವರ ಉದ್ಯೋಗ ಮುಂದುವರಿಯಲಿದೆ ಎಂದು ಭರವಸೆ ನೀಡಿದ ಮೇಲೆ ಅವರ ವೀಸಾ ಅವಧಿ ವಿಸ್ತರಣೆಗೊಂಡಿತ್ತು.

ಜನವರಿ 8ರಂದು ನಾನು ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದೇನೆ ಎಂದು ಚಂದ್ರಶೇಖರ್ ಕುಮಾರ್ ಮಾಹಿತಿ ನೀಡಿದ್ದರು ಎಂದು ಅವರ ಸೋದರಳಿಯ ಸಾಹಿಲ್ ತಿಳಿಸಿದ್ದಾರೆ. ಈದ್ ಬಳಿಕ, ಚಂದ್ರಶೇಖರ್ ರ ಟಿಕೆಟ್ ವೆಚ್ಚವನ್ನು ಮರುಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದ ಕಂಪನಿಯು, ಸ್ವಂತ ಖರ್ಚಿನಲ್ಲಿ ಭಾರತಕ್ಕೆ ಮರಳುವಂತೆ ಅವರಿಗೆ ಸೂಚಿಸಿತ್ತು. ಜನವರಿ 10ರಂದು ಜಿದ್ದಾದಿಂದ ಅಹಮದಾಬಾದ್ ಗೆ ಮರಳಲು ಅವರು ಇಂಡಿಗೊ ವಿಮಾನವನ್ನು ಟಿಕೆಟ್ ಕಾಯ್ದಿರಿಸಿದ್ದರು. ತದನಂತರ, ವಾರಣಾಸಿ ಮತ್ತು ಧನ್ ಬಾದ್ ಗೆ ರೈಲಿನಲ್ಲಿ ಪ್ರಯಾಣಿಸುವ ಯೋಜನೆಯನ್ನು ಅವರು ಹೊಂದಿದ್ದರು ಎಂದು ಸಾಹಿಲ್ ಹೇಳಿದ್ದಾರೆ.

ಅವರು ನಾಪತ್ತೆಯಾಗಿ ಒಂದು ತಿಂಗಳೇ ಆಗಿದ್ದರೂ, ಅವರ ನಾಪತ್ತೆಯ ಕುರಿತು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಚಂದ್ರಶೇಖರ್ ಕುಮಾರ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!