Thursday, August 6, 2026
spot_imgspot_img
spot_imgspot_img

ಲೈಂಗಿಕ ದೌರ್ಜನ್ಯ ಪ್ರಕರಣ – ತರುಣ್ ತೇಜ್‌ಪಾಲ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ

- Advertisement -
- Advertisement -

ಪಣಜಿ: 2013ರ ತೀವ್ರ ಸಂಚಲನ ಮೂಡಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರಿಗೆ ಬಾಂಬೆ ಹೈಕೋರ್ಟ್‌ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಮಸಂಡೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ ಇಂದು ಬೆಳಗ್ಗೆ ದೋಷಿ ಎಂದು ತೀರ್ಪು ನೀಡಿತ್ತು. ವಿಚಾರಣಾ ನ್ಯಾಯಾಲಯವು ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ಇಂದು ಬೆಳಗ್ಗೆ ವಜಾಗೊಳಿಸಿದ್ದ ಹೈಕೋರ್ಟ್‌ ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತು. ಕೋರ್ಟ್‌ 10 ವರ್ಷ ಜೈಲು ಶಿಕೆಯ ಜೊತೆ 5 ಲಕ್ಷ ರೂ. ದಂಡವನ್ನು ವಿಧಿಸಿ 2 ವಾರಗಳ ಒಳಗಡೆ ಪೊಲೀಸರಿಗೆ ಶರಣಾಗಬೇಕು ಎಂದು ಸೂಚಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(f), 376(2)(k) (ಅತ್ಯಾಚಾರ) ಹಾಗೂ ಸೆಕ್ಷನ್ 354A, 354B (ಲೈಂಗಿಕ ಕಿರುಕುಳ) ಅಡಿಯಲ್ಲಿ 62 ವರ್ಷದ ತೇಜ್‌ಪಾಲ್ ದೋಷಿ ಎಂದು ನ್ಯಾಯಪೀಠ ತೀರ್ಮಾನಿಸಿದೆ.

ನವೆಂಬರ್ 2013 ರಲ್ಲಿ ಗೋವಾದ ಪಂಚತಾರಾ ಹೋಟೆಲ್‌ವೊಂದರಲ್ಲಿ ನಡೆದ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ, ಲಿಫ್ಟ್‌ನಲ್ಲಿ ತಮ್ಮ ಮೇಲೆ ತೇಜ್‌ಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಕಿರಿಯ ಮಹಿಳಾ ಸಹೋದ್ಯೋಗಿ ಆರೋಪಿಸಿದ್ದರು. 2017 ರಲ್ಲಿ ಮಾಪುಸಾ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿ 2021 ರಲ್ಲಿ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು.

ತೀರ್ಪು ಪ್ರಕಟಿಸುವ ಸಮಯದಲ್ಲಿ ತೇಜ್‌ಪಾಲ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ತಮ್ಮ ಶಿಕ್ಷೆಯ ಪ್ರಮಾಣ ನಿಗದಿಗೂ ಮುನ್ನ ಲಘು ಶಿಕ್ಷೆ ವಿಧಿಸುವಂತೆ ಕೋರಿದ ತೇಜ್‌ಪಾಲ್, ನನಗೆ ಈಗ 62 ವರ್ಷ. ನಾನೇ ಈ ಪ್ರಕರಣದಲ್ಲಿ ಸಂತ್ರಸ್ತ ಎಂದು ಭಾವಿಸುತ್ತೇನೆ. ನನಗೆ ಹೆಂಡತಿ ಇದ್ದಾಳೆ. ನಾವೀಗ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ದಯವಿಟ್ಟು ನನ್ನ ವಯಸ್ಸನ್ನು ಪರಿಗಣಿಸಿ ರಿಯಾಯಿತಿ ನೀಡಿ ಎಂದು ಪೀಠಕ್ಕೆ ಮನವಿ ಮಾಡಿದರು.

ತೇಜ್‌ಪಾಲ್ ಪರ ಹಿರಿಯ ವಕೀಲ ಆಬಾದ್ ಪೋಂಡಾ ವಾದ ಮಂಡಿಸಿ, ಘಟನೆ ನಡೆದು 13 ವರ್ಷಗಳು ಕಳೆದಿವೆ ಮತ್ತು ತೇಜ್‌ಪಾಲ್ ವಿರುದ್ಧ ಬೇರೆ ಯಾವುದೇ ಎಫ್‌ಐಆರ್ ಇಲ್ಲ. ಹೀಗಾಗಿ ಶಿಕ್ಷೆಯ ಅವಧಿಯಲ್ಲಿ ಸಡಿಲಿಕೆ ನೀಡಬೇಕು ಹಾಗೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ತೀರ್ಪಿಗೆ 8 ವಾರಗಳ ತಡೆ ನೀಡಬೇಕು ಎಂದು ವಿನಂತಿಸಿದರು.

ಆದರೆ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದನ್ನು ಬಲವಾಗಿ ವಿರೋಧಿಸಿದರು. ಮಗಳು ಸಮಾನವಾದ ಯುವತಿಯ ಮೇಲೆ ತೇಜ್‌ಪಾಲ್ ಈ ಕೃತ್ಯ ಎಸಗಿದ್ದಾರೆ. ಅವರು ತಂದೆಯ ಸ್ಥಾನದಲ್ಲಿದ್ದು ಮಾರ್ಗದರ್ಶನ ನೀಡಬೇಕಿತ್ತು. ಸಂತ್ರಸ್ತೆ ನಿರಾಕರಿಸಿದರೂ ಅವರು ಕಿರುಕುಳ ಮುಂದುವರಿಸಿದ್ದರು. ಈ ಸಮಾಜಕ್ಕೆ ಸಂದೇಶ ಸಾರಲು ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು ಎಂಬುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!