Monday, August 10, 2026
spot_imgspot_img
spot_imgspot_img

ಗಲಭೆ ಎಬ್ಬಿಸಲು ಸಂಚು: ವಿದೇಶಿ ವ್ಯಕ್ತಿ ಜೊತೆ ಸಂಪರ್ಕ ಹೊಂದಿದ್ದ ಯುವಕನ ಬಂಧನ

- Advertisement -
- Advertisement -

ರಾಯಚೂರು: ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ರಾಯಚೂರಿನ ಯುವಕನನ್ನು ಸದರ್‌ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಶಾಹಿಲ್ (24) ಎಂದು ಗುರುತಿಸಲಾಗಿದ್ದು, ಈತ ರಾಯಚೂರಿನಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದ ಎನ್ನಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ‘ರಾಣಾ ಭಾಯ್’ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಶಾಹಿಲ್ ವಿದೇಶಿ ವ್ಯಕ್ತಿಯೊಬ್ಬನೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಆ ಖಾತೆಯಲ್ಲಿನ ಕೆಲವು ಪೋಸ್ಟ್‌ಗಳನ್ನು ಲೈಕ್ ಮಾಡುವುದರ ಜೊತೆಗೆ ಕಮೆಂಟ್ ಹಾಗೂ ಶೇರ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ವೇಳೆ, ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳಿಂದ ಪ್ರಭಾವಿತನಾಗಿದ್ದ ಶಾಹಿಲ್, ರಾಣಾ ಭಾಯ್‌ಗೆ ಸಂದೇಶ ಕಳುಹಿಸಿ ಪಿಸ್ತೂಲ್‌ಗಾಗಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ವಿದೇಶಿ ವ್ಯಕ್ತಿ ಶಾಹಿಲ್‌ನ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಪಡೆದುಕೊಂಡಿದ್ದ ಎನ್ನಲಾಗಿದ್ದು, ಜುಲೈ 14ರಿಂದ ಇಬ್ಬರ ನಡುವೆ ಹಲವು ವಿಚಾರಗಳ ಕುರಿತು ಸಂಭಾಷಣೆ ನಡೆದಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಗಲಭೆ ಎಬ್ಬಿಸುವಂತೆ ಶಾಹಿಲ್‌ಗೆ ಪ್ರಚೋದನೆ ನೀಡಲಾಗಿದ್ದು, ಇದಕ್ಕಾಗಿ ಹಣ ಹಾಗೂ ಪಿಸ್ತೂಲ್ ನೀಡುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ಈ ಸಂಬಂಧ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಸದರ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಲಭೆ ಎಬ್ಬಿಸುವ ಸಂಚಿನಲ್ಲಿ ಶಾಹಿಲ್ ಬೇರೆ ಯಾರನ್ನಾದರೂ ಸಂಪರ್ಕಿಸಿದ್ದಾನೆಯೇ? ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಸಾಮಾಜಿಕ ಜಾಲತಾಣದ ಮೂಲಕ ನಡೆದಿರುವ ಸಂಪರ್ಕದ ಸ್ವರೂಪ ಹಾಗೂ ವಿದೇಶಿ ವ್ಯಕ್ತಿಯ ಹಿನ್ನೆಲೆಯ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!