


ಬೆಂಗಳೂರು: ನಗರದ ಹೊರವಲಯದ ಆನೇಕಲ್ ತಾಲ್ಲೂಕಿನ ರಾಮಕೃಷ್ಣಾಪುರದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿಕೊಂಡು ಸುಮಾರು 86.65 ಲಕ್ಷ ರೂ. ಮೌಲ್ಯದ ಅಕ್ಕಿ, ಗೋಧಿ ಹಾಗೂ ರಾಗಿಯನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಿರುವ ಘಟನೆ ನಡೆದಿದೆ.
ಈ ಸಂಬಂಧ ಐವರ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಸ್ತಾನು ವ್ಯವಸ್ಥಾಪಕ ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ನಾರಾಯಣಸ್ವಾಮಿ, ತಿಮ್ಮರಾಜು, ರಾಜಕುಮಾರ್ ಮತ್ತು ತೌಸಿಕ್ ವಿರುದ್ಧ ಪ್ರಕರಣ ದಾಖಲಾಗಿದೆ.
ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಅಕ್ಕಿ, ಗೋಧಿ ಹಾಗೂ ರಾಗಿಯನ್ನು ಅನಧಿಕೃತವಾಗಿ ಹೊರಗೆ ಸಾಗಿಸಿ ಮಾರಾಟ ಮಾಡಿರುವ ಆರೋಪ ಕೇಳಿಬಂದಿದ್ದು, ಸತತ ಮೂರು ದಿನಗಳ ಕಾಲ ಗೋದಾಮು ತೆರೆಯದೇ ಇದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಆಹಾರ ಶಿರಸ್ತೇದಾರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಗೋದಾಮಿಗೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ಬಳಿಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಗೋದಾಮನ್ನು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಗೋದಾಮಿನಲ್ಲಿದ್ದ ಅಕ್ಕಿ, ಗೋಧಿ ಹಾಗೂ ರಾಗಿಯನ್ನು ಅಕ್ರಮವಾಗಿ ಸಾಗಿಸಿರುವುದು ಬೆಳಕಿಗೆ ಬಂದಿದೆ.
ನೂರಾರು ಕ್ವಿಂಟಲ್ ಅಕ್ಕಿ, ಗೋಧಿ ಹಾಗೂ ರಾಗಿಯನ್ನು ಗೋದಾಮಿನಿಂದ ಹೊರಗೆ ಸಾಗಿಸಿ ವಂಚನೆ ಮಾಡಿರುವ ಸಾಧ್ಯತೆ ಇದ್ದು, ಒಟ್ಟು 86.65 ಲಕ್ಷ ರೂ. ಮೌಲ್ಯದ ದಾಸ್ತಾನು ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿತ ಅಧಿಕಾರಿ ಹಾಗೂ ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದಾರೆ. ಸೂರ್ಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








