


ವಿಟ್ಲ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಿಟ್ಲ ಠಾಣಾ ಪೊಲೀಸರು ಸಾಲೆತ್ತೂರು ಸಮೀಪದ ಕೂಡುರಸ್ತೆ ಚೆಕ್ ಪೋಸ್ಟ್ ಬಳಿ ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಕೂಡುರಸ್ತೆ ಚೆಕ್ ಪೋಸ್ಟ್‌ನಲ್ಲಿ ಆ.8 ರಂದು ಮುಂಜಾನೆ 6:15 ಕ್ಕೆ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೇಬಲ್ ಹರೀಶ್ ಮತ್ತು ಹೆಚ್‌ಜಿ ಉಮೇಶ್ ಅವರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆನೆಕಲ್ಲು ಕಡೆಯಿಂದ ಬಂದ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ.
ಬಳಿಕ ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸ್ ಉಪನಿರೀಕ್ಷಕ ಬಿ.ಎಸ್. ನಾಯಕ್ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೆಂಪುಕಲ್ಲನ್ನು ದಾಖಲೆ ರಹಿತವಾಗಿ ಕೊಂಡೊಯ್ಯುತ್ತಿರುವುದು ಬೆಳಕಿಗೆ ಬಂದಿದೆ ಮಾತ್ರವಲ್ಲದೆ ಕಲ್ಲುಗಳನ್ನು ಕೇರಳದ ಆನೆಕಲ್ಲು ಸಮೀಪದ ಕೊಮ್ಮಂಗಲದ ಶ್ರೀನಿಧಿ ಭಟ್ ಅವರ ಕೋರೆಯಿಂದ ತರಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ತಿಪ್ಪೇಸ್ವಾಮಿ ಎಸ್, ಲಾರಿ ಮಾಲೀಕ ಪ್ರಕಾಶ್ ಭಟ್ ಹಾಗೂ ಕೋರೆ ಮಾಲೀಕ ಶ್ರೀನಿಧಿ ಭಟ್ ಅವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.








