
ಬೆಂಗಳೂರು: ಆನ್ಲೈನ್ ಆರ್ಥಿಕ ವಂಚನೆ ಹಾಗೂ ಸೈಬರ್ ಅಪರಾಧಗಳ ತನಿಖೆ ವೇಳೆ ಬ್ಯಾಂಕ್ ಖಾತೆಗಳನ್ನು ತಕ್ಷಣ ಸ್ಥಗಿತಗೊಳಿಸಲು ಅಥವಾ ಆಸ್ತಿಗಳನ್ನು ಜಪ್ತಿ ಮಾಡಲು ಪೊಲೀಸರಿಗೆ ಮ್ಯಾಜಿಸ್ಟ್ರೇಟ್ನ ಪೂರ್ವಾನುಮತಿ ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಜೆಎಆರ್ ಗೋಲ್ಡ್ ರಿಟೇಲ್ ಪ್ರೈವೇಟ್ ಲಿಮಿಟೆಡ್ನ ಬ್ಯಾಂಕ್ ಖಾತೆಗಳನ್ನು ಡಿ-ಫ್ರೀಜ್ ಮಾಡಲು ಹಾಗೂ ಕಂಪನಿಯಿಂದ ವಶಪಡಿಸಿಕೊಂಡಿದ್ದ 2,489 ಕೆ.ಜಿ. ಚಿನ್ನ ಮತ್ತು ಬೆಳ್ಳಿ ಗಟ್ಟಿಗಳನ್ನು ಬಿಡುಗಡೆ ಮಾಡುವಂತೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೋರಮಂಗಲ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.ಬ್ಯಾಂಕ್ ಖಾತೆಗಳನ್ನು ಮೊದಲು ಸ್ಥಗಿತಗೊಳಿಸಿ, ಬಳಿಕ ಮ್ಯಾಜಿಸ್ಟ್ರೇಟ್ಗೆ ಮಾಹಿತಿ ನೀಡಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 106ರ ಅಡಿ ಪೊಲೀಸರಿಗೆ ಅಧಿಕಾರವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸೈಬರ್ ವಂಚನೆಯಲ್ಲಿ ಹಣವು ಕೆಲವೇ ಸೆಕೆಂಡುಗಳಲ್ಲಿ ಹಲವು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆಯಾಗುವ ಸಾಧ್ಯತೆಯಿರುವುದರಿಂದ, ಸಂತ್ರಸ್ತರ ಹಣವನ್ನು ರಕ್ಷಿಸಲು ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವ ಅಗತ್ಯವಿದೆ ಎಂದು ನ್ಯಾಯಪೀಠ ತಿಳಿಸಿದೆ.ಮ್ಯಾಜಿಸ್ಟ್ರೇಟ್ನ ಪೂರ್ವಾನುಮತಿಗಾಗಿ ಕಾಯುತ್ತಿದ್ದರೆ ವಂಚನೆಯ ಹಣವನ್ನು ಹಲವು ಖಾತೆಗಳಿಗೆ ವರ್ಗಾಯಿಸುವುದು, ಬೇರೆ ರೂಪಕ್ಕೆ ಪರಿವರ್ತಿಸುವುದು ಅಥವಾ ಸಂಪೂರ್ಣವಾಗಿ ಮಾಯವಾಗುವ ಸಾಧ್ಯತೆಯಿದೆ.
ಹೀಗಾಗಿ, ಮೊದಲು ಹಣವನ್ನು ಸಂರಕ್ಷಿಸಿ, ಬಳಿಕ ಕೈಗೊಂಡ ಕ್ರಮದ ಕುರಿತು ಮ್ಯಾಜಿಸ್ಟ್ರೇಟ್ಗೆ ತಕ್ಷಣ ವರದಿ ಮಾಡುವುದು ಕಾನೂನುಬದ್ಧ ಕ್ರಮ ಎಂದು ಹೈಕೋರ್ಟ್ ಹೇಳಿದೆ.ಈ ಹಿನ್ನೆಲೆಯಲ್ಲಿ ಆನ್ಲೈನ್ ಆರ್ಥಿಕ ವಂಚನೆ ಹಾಗೂ ಸೈಬರ್ ಅಪರಾಧಗಳ ತನಿಖೆ ಸಂದರ್ಭದಲ್ಲಿ ಬ್ಯಾಂಕ್ ಖಾತೆ ಸ್ಥಗಿತ ಅಥವಾ ನಿರ್ದಿಷ್ಟ ಆಸ್ತಿ ಜಪ್ತಿಗೆ ಮ್ಯಾಜಿಸ್ಟ್ರೇಟ್ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.







