ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ನಗರದಾದ್ಯಂತ ಭದ್ರತೆಯನ್ನು ತೀವ್ರಗೊಳಿಸಿರುವ ನಡುವೆಯೇ, ಶುಕ್ರವಾರ ದಿಲ್ಲಿ ಹೈಕೋರ್ಟ್ ಬಾಂಬ್ ಬೆದರಿಕೆ ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಸಿದೆ. ಈ ಬೆದರಿಕೆ ಇಮೇಲ್ ಮೂಲಕ ಬಂದಿದೆ ಎಂದು ತಿಳಿದುಬಂದಿದೆ.

‘ದಿಲ್ಲಿ ಹೈಕೋರ್ಟ್ ನಲ್ಲಿ 30 ಎಂಬಿ ಬ್ಲಾಸ್ಟ್’ ಎಂಬ ವಿಷಯದ ಇಮೇಲ್ನಲ್ಲಿ ಅಪರಾಹ್ನ 2:11ಕ್ಕೆ ಬಾಂಬ್ ಸ್ಫೋಟಿಸಲಿದೆ ಎಂದು ಬರೆಯಲಾಗಿದೆ.


ಈ ಬೆದರಿಕೆ ಹುಸಿ ಎಂದು ತೋರುತ್ತದೆ ಎಂದು ದಿಲ್ಲಿ ಹೈಕೋರ್ಟ್ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಕುನಾಲ್ ಮಲ್ಲೋತ್ರಾ ಹೇಳಿದ್ದಾರೆ. “ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಅಗತ್ಯ ಕ್ರಮಗಳನ್ನು ಜಾರಿಗೆ ತರಲಾಗಿದೆ” ಎಂದು ಅವರು ತಿಳಿಸಿದ್ದಾರೆ.ಇನ್ನೂ ಐದು ಸ್ಥಳಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ ಎಂದು ದಿಲ್ಲಿ ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಅವುಗಳೆಂದರೆ: ಜಾಮ್ನಗರ ಹೌಸ್, ಝಂಡೇವಾಲನ್ ಫ್ಲಾಟೆಡ್ ಫ್ಯಾಕ್ಟರಿ ಕಾಂಪ್ಲೆಕ್ಸ್, ಎಂಬಿ ಸಾಕೇತ್ ಕಚೇರಿ/ಜಿಲ್ಲಾಧಿಕಾರಿ ಕಚೇರಿ, IGI ವಿಮಾನ ನಿಲ್ದಾಣದ ಟರ್ಮಿನಲ್ 3 ಮತ್ತು ದಿಲ್ಲಿ ಕಂಟೋನ್ಮಂಟ್ನ SDM ಕಚೇರಿ. ಈ ಎಲ್ಲಾ ಸ್ಥಳಗಳಿಗೆ ಅಗ್ನಿಶಾಮಕ ವಾಹನಗಳನ್ನು ರವಾನಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.>ದಿಲ್ಲಿಯಾದ್ಯಂತ ಭದ್ರತೆ ಬಿಗಿಭಾರತವು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಮತ್ತು ದೇಶದ ಇತರ ಭಾಗಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.
ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ಹೆಚ್ಚುವರಿ ತಪಾಸಣೆ ನಡೆಸಲಾಗುತ್ತಿದೆ. ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಜನಸಂಚಾರ ಹೆಚ್ಚಾಗುವ ಸಾರ್ವಜನಿಕ ಸ್ಥಳಗಳು ಮತ್ತು ಪ್ರದೇಶಗಳ ಮೇಲೆ ಭದ್ರತಾ ಪಡೆಗಳು ತೀವ್ರ ನಿಗಾ ಇರಿಸಿವೆ.








