
ಬಂಟ್ವಾಳ: ಹಾಸನದಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ₹1.05 ಕೋಟಿಗೂ ಅಧಿಕ ಮೌಲ್ಯದ ಮಾದಕವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಆಗಸ್ಟ್ 16ರಂದು ರಾತ್ರಿ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ. ಅವರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ, KA-01-MA-1284 ನೋಂದಣಿಯ ಕಾರನ್ನು ತಡರಾತ್ರಿ ತಡೆದು ಪರಿಶೀಲಿಸಿದರು.ಕಾರಿನ ಚಾಲಕನಾಗಿದ್ದ ಬೆಂಗಳೂರು ಕೆಂಗೇರಿ ನಿವಾಸಿ **ಮಹಮ್ಮದ್ ಅಮೀರ್ ಜರ್ತಾಬ್ (35)**ನನ್ನು ವಿಚಾರಣೆ ನಡೆಸಿದಾಗ, ಕಾರಿನಲ್ಲಿ ಮಾದಕವಸ್ತು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾರಿನ ತಪಾಸಣೆ ವೇಳೆ 538.63 ಗ್ರಾಂ MDMA ಹಾಗೂ 99.12 ಗ್ರಾಂ ಕೊಕೈನ್ ಪತ್ತೆಯಾಗಿದೆ. ಜೊತೆಗೆ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ ಸೇರಿದಂತೆ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಪಡಿಸಿಕೊಂಡ MDMAಯ ಅಂದಾಜು ಮೌಲ್ಯ ₹53,86,300 ಹಾಗೂ ಕೊಕೈನ್‌ನ ಮೌಲ್ಯ ₹49,56,000 ಎಂದು ಅಂದಾಜಿಸಲಾಗಿದೆ. ಇತರ ಸೊತ್ತುಗಳ ಮೌಲ್ಯ ಸೇರಿ ಒಟ್ಟು ₹1,05,59,450 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 113/2026, NDPS Act 1985ರ ಕಲಂ 8(C) r/w 22(C), 21(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.








