Tuesday, August 18, 2026
spot_imgspot_img
spot_imgspot_img

RSS–ಬಿಜೆಪಿ ಪರ ಕೆಲಸಕ್ಕೆ ಪೊಲೀಸ್ ಹುದ್ದೆ ತೊರೆದ ಕಾನ್ಸ್‌ಸ್ಟೇಬಲ್; 2029ರವರೆಗೆ ಬರಿಗಾಲಿನ ಪ್ರತಿಜ್ಞೆ

- Advertisement -
- Advertisement -

ಗಾಂಧಿನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಬಿಜೆಪಿಯಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ಕೆಲಸ ಮಾಡುವ ಉದ್ದೇಶದಿಂದ ಗುಜರಾತ್‌ನ 32 ವರ್ಷದ ಪೊಲೀಸ್ ಕಾನ್ಸ್‌ಸ್ಟೇಬಲ್ ರಾಮ್ಗರ್ ಮೋಹನ್ಗರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಆದೇಸರ್ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್ಗರ್ ಅವರು ಆಗಸ್ಟ್ 14ರಂದು ಪೂರ್ವ ಕಚ್‌ನ ಪೊಲೀಸ್ ವರಿಷ್ಠಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.ತಮ್ಮ ರಾಜೀನಾಮೆ ಪತ್ರ ಹಾಗೂ ಹೇಳಿಕೆಗಳಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿರುವ ಅವರು, RSS ಅನ್ನು ಬಲಪಡಿಸುವುದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಲು ತಮ್ಮ ಜೀವನವನ್ನು ಮುಡಿಪಾಗಿಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಅಲ್ಲದೆ, 2029ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಮರು ಆಯ್ಕೆಯಾಗುವವರೆಗೆ ಬರಿಗಾಲಿನಲ್ಲಿ ನಡೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.ಕಚ್‌ನ ರಾಪರ್ ತಾಲೂಕಿನ ಹಮೀರ್ಪಾರ ಗ್ರಾಮದವರಾದ ಮೋಹನ್ಗರ್ ಅವರು 12ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದು, 2019ರ ಬ್ಯಾಚ್‌ನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಕೃಷಿ ಕುಟುಂಬದಿಂದ ಬಂದಿರುವ ಅವರು ವಿವಾಹಿತರಾಗಿದ್ದು, ಮೂವರು ಮಕ್ಕಳಿದ್ದಾರೆ.

ಬಾಲ್ಯದಿಂದಲೇ ಸ್ಥಳೀಯ RSS ಶಾಖೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದ ಕಾರಣ ಸಂಘದೊಂದಿಗಿನ ತಮ್ಮ ಒಡನಾಟ ಚಿಕ್ಕಂದಿನಿಂದಲೇ ಆರಂಭವಾಯಿತು ಎಂದು ಅವರು ಹೇಳಿದ್ದಾರೆ. ಆದೇಸರ್‌ಗೆ ನಿಯೋಜನೆಗೊಳ್ಳುವ ಮೊದಲು ಗಾಂಧಿಧಾಮದಲ್ಲಿ ಸೇವೆ ಸಲ್ಲಿಸಿದ್ದರು.

ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ

ಮೋಹನ್ಗರ್ ರಾಜೀನಾಮೆ ಸಲ್ಲಿಸಿದ್ದರೂ, ಅದು ಇನ್ನೂ ಅಧಿಕೃತವಾಗಿ ಅಂಗೀಕಾರಗೊಂಡಿಲ್ಲ. ರಾಜೀನಾಮೆಗೆ ಅವರು ನೀಡಿರುವ ಕಾರಣಗಳು ಸೂಕ್ತವಾಗಿಲ್ಲ ಎಂಬ ಕಾರಣಕ್ಕೆ ಸದ್ಯಕ್ಕೆ ರಾಜೀನಾಮೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಮೌಖಿಕವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ಸ್‌ಪೆಕ್ಟರ್ ಅವರಿಂದ ಕರೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಆದೇಸರ್ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ಮೋಹನ್ಗರ್ ತಿಳಿಸಿದ್ದಾರೆ. ರಾಜೀನಾಮೆಯನ್ನು ಔಪಚಾರಿಕವಾಗಿ ಪರಿಶೀಲಿಸಿ ಅಂಗೀಕರಿಸುವವರೆಗೆ ತಮ್ಮ ಅಧಿಕೃತ ಕರ್ತವ್ಯಗಳನ್ನು ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!