Tuesday, October 6, 2026
spot_imgspot_img
spot_imgspot_img

ಮೃತ ಪೊಲೀಸ್ ಸಿಬ್ಬಂದಿ ವಿಮಾ ಹಣ ಬಿಡುಗಡೆಗೆ ಲಂಚ ಬೇಡಿಕೆ ಆರೋಪ-ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ

- Advertisement -
- Advertisement -

ಮಡಿಕೇರಿ : ಮೃತಪಟ್ಟ ಪೊಲೀಸ್ ಸಿಬ್ಬಂದಿಯ ವಿಮಾ ಹಣವವನ್ನು ಬಿಡುಗಡೆ ಮಾಡಲು 25 ಸಾವಿರ ರೂ. ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ಆರೋಪದಡಿ ಕರ್ನಾಟಕ ಸರಕಾರಿ ವಿಮಾ ಇಲಾಖೆ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ.

ನಗರದ ಮಹದೇವಪೇಟೆ ರಸ್ತೆಯಲ್ಲಿರುವ ಸರಕಾರಿ ವಿಮಾ ಇಲಾಖೆ ಕಚೇರಿಯ ಜಿಲ್ಲಾ ವಿಮಾ ಅಧಿಕಾರಿ ಹೇಮ್ ಕುಮಾರ್‌ ಲೋಕಾಯುಕ್ತದ ಬಲೆಗೆ ಬಿದ್ದ ಅಧಿಕಾರಿ.

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದೀಪ್ ರೈ ಎಂಬವರು ಕೆಲವು ತಿಂಗಳುಗಳ ಹಿಂದೆ ಮೃತಪಟ್ಟಿದ್ದರು. ಪತಿಯ ವಿಮಾ ಹಣವನ್ನು ಪಡೆಯಲು ಪತ್ನಿ ರೋಹಿಣಿ ಅವರು ನಗರದ ಕರ್ನಾಟಕ ಸರಕಾರಿ ವಿಮಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

ಈ ಸಂದರ್ಭ ಜಿಲ್ಲಾ ವಿಮಾ ಅಧಿಕಾರಿ ಹೇಮ್ ಕುಮಾರ್ ಅವರು ವಿಮೆ ಹಣ ಬಿಡುಗಡೆಗೆ 25 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ರೋಹಿಣಿ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ಈ ಕುರಿತು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಅವರಿಗೆ ವರದಿ ಸಲ್ಲಿಸಿದ್ದರು.

ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಸೋಮವಾರ ಕೊಡಗು ಲೋಕಾಯುಕ್ತ ಡಿವೈಎಸ್ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹಣ ಸಹಿತ ವಿಮಾ ಅಧಿಕಾರಿ ಹೇಮ ಕುಮಾರ್‌ ಅವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುತ್ತದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!