ಬಿಹಾರದಲ್ಲಿ 36 ಮಕ್ಕಳು ಅಸ್ವಸ್ಥ



ಪಾಟ್ನಾ: ಶಾಲೆಯ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್ ಪೌಡರ್ ಸೇರಿಸಿದ ಪರಿಣಾಮ 36 ವಿದ್ಯಾರ್ಥಿನಿಯರು ಅಸ್ವಸ್ಥರಾದ ಆಘಾತಕಾರಿ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ. ನಳಂದದ ನೂರ್ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಪರಾಸಿಯ ಮಿಡಲ್ ಸ್ಕೂಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಬಿಸಿಯೂಟ ಸೇವಿಸಿದ ಬಳಿಕ ಹಲವು ವಿದ್ಯಾರ್ಥಿಗಳಿಗೆ ತಲೆತಿರುಗುವಿಕೆ ಹಾಗೂ ವಾಂತಿ ಕಾಣಿಸಿಕೊಂಡಿದೆ.
ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಅವರನ್ನು ಬಿಹಾರ್‌ಶರೀಫ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯ ಬಿಸಿಯೂಟದಲ್ಲಿ ಸೋಯಾಬೀನ್ ಅಕ್ಕಿಯನ್ನು ನೀಡಲಾಗಿತ್ತು. ಊಟದಲ್ಲಿ ಉಪ್ಪಿನ ಕೊರತೆ ಇದೆ ಎಂದು ಕೆಲವರು ಗಮನಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಅಡುಗೆಮನೆಯಲ್ಲಿ ಉಪ್ಪು ಮತ್ತು ಡಿಟರ್ಜೆಂಟ್ ಪೌಡರ್ ಅನ್ನು ಒಂದೇ ಸ್ಥಳದಲ್ಲಿ ತಪ್ಪಾಗಿ ಇಡಲಾಗಿತ್ತು ಎನ್ನಲಾಗಿದೆ. ಅಡುಗೆಯವರು ಡಿಟರ್ಜೆಂಟ್ ಪೌಡರ್ ಅನ್ನು ಉಪ್ಪು ಎಂದು ತಪ್ಪಾಗಿ ಭಾವಿಸಿ ಆಹಾರಕ್ಕೆ ಸೇರಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಊಟ ಮಾಡಿದ ಕೆಲವೇ ಸಮಯದಲ್ಲಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಮೊದಲು ಶಾಲೆಯಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಿವಿಲ್ ಸರ್ಜನ್ ಡಾ. ಜಯ ಪ್ರಕಾಶ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.ಬಿಹಾರ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ. ವೈದ್ಯರಿಂದ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಬಿಸಿಯೂಟ ತಯಾರಿಕೆ ಮತ್ತು ವಿತರಣೆಯಲ್ಲಿ ಈ ರೀತಿಯ ಲೋಪ ಹೇಗೆ ಸಂಭವಿಸಿತು ಎಂಬುದರ ಕುರಿತು ವಿವರವಾದ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.








