Monday, August 24, 2026
spot_imgspot_img
spot_imgspot_img

ಹೆಬ್ಬಾಳ–ಸಿಲ್ಕ್‌ಬೋರ್ಡ್ ಸುರಂಗ ರಸ್ತೆ ಯೋಜನೆಗೆ ಅದಾನಿ ಎಂಟರ್‌ಪ್ರೈಸಸ್ L1 ಬಿಡ್ಡರ್

- Advertisement -
- Advertisement -

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ 16.75 ಕಿ.ಮೀ. ಉದ್ದದ ಹೆಬ್ಬಾಳ–ಸಿಲ್ಕ್‌ಬೋರ್ಡ್ ಉತ್ತರ–ದಕ್ಷಿಣ ಸುರಂಗ ರಸ್ತೆ ಯೋಜನೆಗೆ ಅದಾನಿ ಎಂಟರ್‌ಪ್ರೈಸಸ್ ಅತ್ಯಂತ ಕಡಿಮೆ ಮೊತ್ತದ ಟೆಂಡರ್ (L1) ಸಲ್ಲಿಸಿರುವ ಸಂಸ್ಥೆಯಾಗಿ ಹೊರಹೊಮ್ಮಿದೆ.ಆದರೆ, ಯೋಜನೆಯ ಗುತ್ತಿಗೆ ಇನ್ನೂ ಅಂತಿಮವಾಗಿ ಹಂಚಿಕೆಯಾಗಿಲ್ಲ. ಸರ್ಕಾರದ ಅಂದಾಜು ವೆಚ್ಚ ₹17,698 ಕೋಟಿಯಾಗಿದ್ದರೆ, ಅದಾನಿ ಎಂಟರ್‌ಪ್ರೈಸಸ್ ₹22,267 ಕೋಟಿಯ ಬಿಡ್ ಸಲ್ಲಿಸಿದೆ. ಇದು ಸರ್ಕಾರದ ಅಂದಾಜಿಗಿಂತ ಸುಮಾರು ₹4,569 ಕೋಟಿ ಹೆಚ್ಚಾಗಿದೆ.

ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಮೂಲಕ ಯೋಜನೆಯನ್ನು BOT (Build-Operate-Transfer) ಮಾದರಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಯೋಜನಾ ವೆಚ್ಚದ ಶೇ.40ರಷ್ಟನ್ನು ಸರ್ಕಾರ Viability Gap Funding ಮೂಲಕ ಭರಿಸಲಿದ್ದು, ಉಳಿದ ಶೇ.60ರಷ್ಟನ್ನು ಖಾಸಗಿ ಸಂಸ್ಥೆ ಭರಿಸಲಿದೆ.ಟೆಂಡರ್‌ನ ತಾಂತ್ರಿಕ ಮೌಲ್ಯಮಾಪನ ಹಂತದಲ್ಲಿ ಅದಾನಿ ಎಂಟರ್‌ಪ್ರೈಸಸ್ ಹಾಗೂ ಹೈದರಾಬಾದ್ ಮೂಲದ ವಿಶ್ವ ಸಮುದ್ರ ಇಂಜಿನಿಯರಿಂಗ್ ಲಿಮಿಟೆಡ್ ಅರ್ಹತೆ ಪಡೆದಿದ್ದವು. ಅಂತಿಮವಾಗಿ ಅದಾನಿ ಎಂಟರ್‌ಪ್ರೈಸಸ್ L1 ಬಿಡ್ಡರ್ ಆಗಿ ಹೊರಹೊಮ್ಮಿದೆ.ಕ್ಯಾಬಿನೆಟ್‌ ನಿರ್ಧಾರ ಬಾಕಿಅದಾನಿ ಸಲ್ಲಿಸಿರುವ ಬಿಡ್ ಮೊತ್ತ ಸರ್ಕಾರದ ಅಂದಾಜಿಗಿಂತ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಬಿಡ್‌ ಅನ್ನು ಅಂಗೀಕರಿಸುವುದೇ, ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ಮೊತ್ತ ಕಡಿಮೆ ಮಾಡುವುದೇ ಅಥವಾ ಮರು ಟೆಂಡರ್ ಕರೆಯುವುದೇ ಎಂಬ ಬಗ್ಗೆ ರಾಜ್ಯ ಸಚಿವ ಸಂಪುಟ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಸಿಎಂ ಡಿಕೆಶಿ ಭೇಟಿ ಮಾಡಿದ ಗೌತಮ್ ಅದಾನಿಈ ನಡುವೆ ಅದಾನಿ ಎಂಟರ್‌ಪ್ರೈಸಸ್ ಅಧ್ಯಕ್ಷ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಕನಕಪುರದಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದ ಗೌತಮ್ ಅದಾನಿ, ವಾಪಸ್ ತೆರಳುವ ವೇಳೆ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಡಿಕೆಶಿ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಇಬ್ಬರ ನಡುವೆ ನಡೆದ ಮಾತುಕತೆಯ ವಿವರಗಳು ಬಹಿರಂಗವಾಗಿಲ್ಲ. ಈ ಕುರಿತು ಮುಖ್ಯಮಂತ್ರಿ ಅಥವಾ ಅದಾನಿ ಗ್ರೂಪ್‌ನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಇದೇ ವೇಳೆ, ಅಂತಿಮ ಗುತ್ತಿಗೆ ಅನುಮೋದನೆಗೂ ಮುನ್ನವೇ ಅದಾನಿ ಎಂಟರ್‌ಪ್ರೈಸಸ್ ನಿಯಮಾನುಸಾರ ಮಾರ್ಗದುದ್ದಕ್ಕೂ ಮಣ್ಣಿನ ಪರೀಕ್ಷೆ (Geotechnical Investigation/Soil Testing) ಹಾಗೂ ಪ್ರಾಥಮಿಕ ಸರ್ವೇ ಕಾರ್ಯಗಳನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.ದೇಶದ ಹಲವು ಭಾಗಗಳಲ್ಲಿ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳ ನಿರ್ವಹಣೆಯಲ್ಲಿ ಅದಾನಿ ಗ್ರೂಪ್ ತೊಡಗಿಸಿಕೊಂಡಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನೂ ಅದಾನಿ ಸಂಸ್ಥೆ ನಡೆಸುತ್ತಿದೆ.

- Advertisement -

Related news

error: Content is protected !!