

ಮಂಗಳೂರು, ಆ.26: ಚಾಲನಾ ಅನುಜ್ಞಾ ಪತ್ರ (ಲೈಸೆನ್ಸ್) ಇಲ್ಲದೆ ಬಸ್ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಪ್ರಕರಣದಲ್ಲಿ ಬಸ್ ಚಾಲಕ ಹಾಗೂ ಮಾಲಕನಿಗೆ ಮಂಗಳೂರು ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2024ರ ಜುಲೈ 10ರಂದು ನಗರದ ಬೆಂದೂರ್‌ವೆಲ್ ಜಂಕ್ಷನ್ ಬಳಿ 66 ವರ್ಷದ ಸುಂದರಿ ಎಂಬವರು ಶಕ್ತಿನಗರಕ್ಕೆ ತೆರಳುವ ಬಸ್ ಹತ್ತಲು ರಸ್ತೆ ದಾಟುತ್ತಿದ್ದ ವೇಳೆ ಕರಾವಳಿ ವೃತ್ತದ ಕಡೆಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುತ್ತಿದ್ದ ಬಸ್ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಸುಂದರಿ ಅವರ ಬಲಕಾಲಿನ ಮೇಲೆ ಬಸ್ ಹರಿದಿತ್ತು.ಈ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಬಸ್ ಚಾಲಕ ನಿಶಿತ್ ಶೆಟ್ಟಿಗೆ ಚಾಲನಾ ಪರವಾನಗಿ ಇಲ್ಲದಿರುವುದನ್ನು ಪತ್ತೆಹಚ್ಚಿದ್ದರು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಹೆಡ್‌ಕಾನ್‌ಸ್ಟೆಬಲ್ ಲಕ್ಷ್ಮಿಕಾಂತ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್‌ಸಿ 8ನೇ ನ್ಯಾಯಾಲಯದ ನ್ಯಾಯಾಧೀಶೆ ಮೋನಿಷಾ ಆರ್. ಅವರು, ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿದ್ದಕ್ಕಾಗಿ ಚಾಲಕ ನಿಶಿತ್ ಶೆಟ್ಟಿಗೆ 1 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಿದ್ದಾರೆ.ಅದೇ ರೀತಿ, ಲೈಸೆನ್ಸ್ ಇಲ್ಲದ ವ್ಯಕ್ತಿಗೆ ಬಸ್ ಚಲಾಯಿಸಲು ಅವಕಾಶ ನೀಡಿದ್ದಕ್ಕಾಗಿ ಬಸ್ ಮಾಲಕ ಪ್ರೀತಮ್ ದೇವೇಂದ್ರ ಕುಲಾಲ್ ಅವರಿಗೆ 1 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಆರೋನ್ ಡಿಸೋಜ ವಿಟ್ಲ ಅವರು ವಾದಿಸಿದ್ದರು.







