ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕರ್ಜೆ ಸಮೀಪದ ನೂಜಿ ಆಲಡ್ಕ ಶಾಲೆಯಿಂದ ಕರ್ಜೆ ಗುಡ್ಡೆ ಅಂಗಡಿ ಕಡೆಗೆ ಸಾಗುವ ರಸ್ತೆಯಲ್ಲಿ ಮರಗಳು ಬಿದ್ದು ಒಂದು ತಿಂಗಳು ಕಳೆದರೂ ತೆರವುಗೊಳಿಸದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆ ಮಳೆಯಿಂದ ಸಂಪೂರ್ಣ ಹದಗೆಟ್ಟಿದ್ದು, ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ರಸ್ತೆಯಲ್ಲಿ ಹಲವೆಡೆ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ನಡೆದುಕೊಂಡು ಹೋಗುವವರು ಸಮಸ್ಯೆ ಎದುರಿಸುವಂತಾಗಿದೆ.ಇದಲ್ಲದೆ, ರಸ್ತೆಯ ಬದಿಯಲ್ಲಿರುವ ಕೆಲವು ಮರಗಳು ಬಾಗಿಕೊಂಡು ನಿಂತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಕರ್ಜೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಯಲ್ಲಿರುವ ಮರಗಳನ್ನು ಕೂಡಲೇ ತೆರವುಗೊಳಿಸಿ, ರಸ್ತೆ ದುರಸ್ತಿ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಅಪಾಯಕಾರಿಯಾಗಿ ಬಾಗಿಕೊಂಡಿರುವ ಮರಗಳನ್ನೂ ತೆರವುಗೊಳಿಸುವಂತೆ ಕರ್ಜೆ ಪಂಚಾಯತ್ ಪಿಡಿಒ ಹರೀಶ್ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.








