
ಮಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೇಳುತ್ತೇನೆ. ಪಕ್ಷ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಶಾಸಕನಾಗಿ ಗೆದ್ದು ತೋರಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಹಕೀಂ ಕೂರ್ನಡ್ಕ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪುತ್ತಿಲ ಅವರಿಗೆ 55 ಸಾವಿರ ಮತಗಳು ಬಂದಿವೆ. ನನಗೆ ಯಾಕೆ 55 ಸಾವಿರ ಮತಗಳು ಬರಬಾರದು? ನನಗೂ ಹಿಂದೂಗಳ ಮತಗಳು ಬರುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಅವರ ಬೆಂಬಲಿಗರು ಮತ್ತು ಹಕೀಂ ಕೂರ್ನಡ್ಕ ಅವರ ನಡುವೆ ನಡೆದಿದ್ದ ಎನ್ನಲಾದ ಗಲಾಟೆಯ ಹಿನ್ನೆಲೆಯಲ್ಲಿ ಹಕೀಂ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸುವುದು ತಮ್ಮ ಮೊದಲ ಆದ್ಯತೆ. ಆದರೆ ಪಕ್ಷ ಟಿಕೆಟ್ ನಿರಾಕರಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
“ನನಗೆ ಜನರ ಬೆಂಬಲವಿದೆ. ಪುತ್ತಿಲ ಅವರಿಗೆ 55 ಸಾವಿರ ಮತಗಳು ಸಿಕ್ಕಿರುವಾಗ, ನನಗೂ ಅದೇ ರೀತಿಯ ಮತಗಳು ಸಿಗಬಹುದು. ಹಿಂದೂಗಳೂ ನನಗೆ ಮತ ಹಾಕುತ್ತಾರೆ” ಎಂಬ ಹಕೀಂ ಕೂರ್ನಡ್ಕ ಅವರ ಹೇಳಿಕೆ ಇದೀಗ ಪುತ್ತೂರು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.








