
ಪುತ್ತೂರು: ಪುತ್ತೂರು ಪತ್ರಿಕಾ ಭವನದ ಮುಂಭಾಗದಲ್ಲಿ ಶಾಸಕರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಾಸಕರ ಆಪ್ತರು ತಮ್ಮದೇ ಪಕ್ಷದ ಕಾರ್ಯಕರ್ತನೊಂದಿಗೆ ನಡೆದುಕೊಂಡ ರೀತಿಯು ಪುತ್ತೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಪುತ್ತೂರು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಆರೋಪಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಭಯದ ವಾತಾವರಣ ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಜನಪ್ರತಿನಿಧಿಯೊಬ್ಬರು ತಮ್ಮ ಪಕ್ಷದ ಕಾರ್ಯಕರ್ತನ ವಿರುದ್ಧ ಬೆಂಬಲಿಗರೊಂದಿಗೆ ಬೀದಿಗೆ ಬಂದು ನಿಲ್ಲುವುದು ರಾಜಕೀಯ ಸಂಸ್ಕೃತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪುತ್ತೂರು ಕಾಂಗ್ರೆಸ್‌ನಲ್ಲಿರುವ ಭಿನ್ನಾಭಿಪ್ರಾಯ ಹಾಗೂ ಆಂತರಿಕ ರಾಜಕೀಯ ಇದೀಗ ಸಾರ್ವಜನಿಕ ಸ್ಥಳದಲ್ಲಿ ಗಲಾಟೆಯ ರೂಪ ಪಡೆದುಕೊಂಡಿದೆ ಎಂದು ಟೀಕಿಸಿದರು.
ಪುತ್ತೂರಿನ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಶಾಸಕರು ಹಾಗೂ ಪೊಲೀಸ್ ಇಲಾಖೆ ವಿಫಲವಾಗಿವೆ. ಪೊಲೀಸರ ಎದುರಲ್ಲೇ ಹಲ್ಲೆಗೆ ಮುಂದಾಗಿರುವುದು ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಂವಿಧಾನಬದ್ಧ ಸ್ವಾತಂತ್ರ್ಯವಿದೆ. ಆದರೆ ಪುತ್ತೂರಿನಲ್ಲಿ ಶಾಸಕರು ಹಾಗೂ ಅವರ ಬೆಂಬಲಿಗರು ಅದನ್ನು ಸಂಪೂರ್ಣವಾಗಿ ನಿರ್ಬಂಧಿಸಿದಂತೆ ಕಂಡುಬರುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪೊಲೀಸರನ್ನು ನಿಯೋಜಿಸಿಕೊಂಡೇ ಪತ್ರಿಕಾಗೋಷ್ಠಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಿದೆ ಎಂದು ರಾಜೇಶ್ ಬನ್ನೂರು ಹೇಳಿದರು.
ಇದೇ ವೇಳೆ, ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನ ಅಮಳ ರಾಮಚಂದ್ರ ಅವರು ಬಿಜೆಪಿಯವರನ್ನು ‘ಕೋತಿ, ಹಂದಿ’ಗಳಿಗೆ ಹೋಲಿಸಿ ಮಾತನಾಡಿರುವುದನ್ನು ಪ್ರಸ್ತಾಪಿಸಿದ ಅವರು, ನಿಮ್ಮದೇ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ನಡುವಿನ ಬೀದಿ ಜಗಳದ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನಿಸಿದರು.
ಅಲ್ಲದೆ, ಪುತ್ತೂರಿನ ಮತ್ತೊಂದು ಘಟನೆಯ ಕುರಿತು ಮಾತನಾಡುತ್ತಿರುವ ಎಚ್. ಮಹಮ್ಮದಾಲಿ ಅವರು ಪೋಕ್ಸೊ ಪ್ರಕರಣ ದಾಖಲಾಗಿರುವ ವಿಚಾರದ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪದಾಧಿಕಾರಿಗಳಾದ ಸುನೀಲ್ ದಡ್ಡು, ಹರಿಪ್ರಸಾದ್ ಯಾದವ್, ವಿರೂಪಾಕ್ಷ ಮಚ್ಚಿಮಲೆ, ಯುವರಾಜ್ ಹಾಗೂ ಶಶಿಧರ್ ನಾಯಕ್ ಉಪಸ್ಥಿತರಿದ್ದರು.








