Saturday, September 5, 2026
spot_imgspot_img
spot_imgspot_img

ಕೋಚಿಂಗ್ ಸೆಂಟರ್‌ಗಳ ಮನಸೋ ಇಚ್ಛೆ ವಸೂಲಿ ತಡೆಗೆ ಕಟ್ಟುನಿಟ್ಟಿನ ನಿಯಮ : ಸಚಿವ ಯು.ಟಿ.ಖಾದ‌ರ್

- Advertisement -
- Advertisement -

ಬೆಂಗಳೂರು : ‘ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳಿಗೆ ಸಂಪೂರ್ಣ ತಡೆ, ಎಲ್ಲ ಸರಕಾರಿ ಪರೀಕ್ಷೆಗಳು ಹಾಗೂ ನೇಮಕಾತಿಗಳಿಗೆ ನಿರ್ದಿಷ್ಟ ಸಮಯದ ಕ್ಯಾಲೆಂಡರ್ ನಿಗದಿಪಡಿಸುವುದು, ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಹಾಗೂ ಕೋಚಿಂಗ್ ಸೆಂಟರ್ ಗಳ ಮನಸೋ ಇಚ್ಛೆ ವಸೂಲಿ ತಡೆಗೆ ಕಟ್ಟುನಿಟ್ಟಿನ ನಿಯಮ ರೂಪಿಸಿ, ಪೋಷಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಕ್ರಮ ವಹಿಸಲಾಗುವುದು’ ಎಂದು ‘ಶೈಕ್ಷಣಿಕ ಸುಧಾರಣೆ’ ಸಂಬಂಧದ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರೂ ಆಗಿರುವ ಆರೋಗ್ಯ ಸಚಿವ ಯು.ಟಿ.ಖಾದ‌ರ್ ತಿಳಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಸರಕಾರಿ ಶಾಲೆ, ಪಿಯು ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿ, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ ಹಾಗೂ ವಸತಿ ನಿಲಯಗಳ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವುದು. ಪ್ರಸ್ತುತ ಮಾರುಕಟ್ಟೆ ಮತ್ತು ಉದ್ಯಮ ರಂಗದ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಬದಲಾವಣೆ ತಂದು, ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಇಂಟರ್ನ್‌ಶಿಪ್ ಅವಕಾಶಗಳನ್ನು ಹೆಚ್ಚಿಸಲಾಗುವುದು’ ಎಂದು ಹೇಳಿದ್ದಾರೆ.

‘ಪರೀಕ್ಷಾ ಒತ್ತಡ ನಿವಾರಣೆಗೆ ಕೌನ್ಸೆಲಿಂಗ್‌ ವ್ಯವಸ್ಥೆ ಬಲಪಡಿಸುವುದು ಹಾಗೂ ಹಾಸ್ಟೆಲ್, ಕೋಚಿಂಗ್ ಸೆಂಟರಳಲ್ಲಿ ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿಗೆ ಅಗತ್ಯ ಕ್ರಮ ಕೈಗೊಳ್ಳುವುದು. ಎಸ್‌ಸಿ-ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲನ್ಶಿಪ್ ಮತ್ತು ಹಾಸ್ಟೆಲ್‌ ಸೌಲಭ್ಯಗಳನ್ನು ತಲುಪಿಸುವುದು. ಮೇಲ್ಕಂಡ ಎಲ್ಲ ವಿಷಯಗಳ ಕುರಿತು ಶೀಘ್ರದಲ್ಲೇ ವಿದ್ಯಾರ್ಥಿ, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿ ಸರಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದ್ದಾರೆ.

‘ಶಿಕ್ಷಣ ಎಂಬುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಮಕ್ಕಳ ಬದುಕಿಗೆ ದಾರಿದೀಪವಾಗಬೇಕು. ವಿದ್ಯಾರ್ಥಿಗಳ ಪ್ರತಿಯೊಂದು ಸವಾಲು ಮತ್ತು ಕನಸುಗಳಿಗೆ ಸ್ಪಂದಿಸಿ, ಅವರ ಅಭ್ಯುದಯಕ್ಕೆ ಅಗತ್ಯವಿರುವ ಶೈಕ್ಷಣಿಕ ಸುಧಾರಣೆಗಳನ್ನು ತರಲು ಸಂಪುಟ ಉಪಸಮಿತಿಯು ಆಸ್ಥೆವಹಿಸಿ ಗಂಭೀರವಾಗಿ ಚರ್ಚಿಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ. ನಾಡಿನ ವಿದ್ಯಾರ್ಥಿಗಳ ಆಶೋತ್ತರಗಳಿಗೆ ಸೂಕ್ತ ಅವಕಾಶ ಕಲ್ಪಿಸಿ, ಅವರ ಮನೋಬಲವನ್ನು ಸಶಕ್ತಗೊಳಿಸಿ, ಶೈಕ್ಷಣಿಕ ಹಾದಿಯಲ್ಲಿ ಸದೃಢರಾಗಿ ಸಾಗುತ್ತಾ ನೈತಿಕ ಜವಾಬ್ದಾರಿಗಳನ್ನು ಸ್ವಂತಿಕೆಯಿಂದ ನಿರ್ವಹಿಸುವ ಯುವ ಸಮೂಹ ಸಜ್ಜುಗೊಳಿಸುವುದು ನಮ್ಮ ಮುಖ್ಯ ಉದ್ದೇಶ’ ಎಂದು ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಸಂಪುಟದ ಉಪಸಮಿತಿ ಸದಸ್ಯರೂ ಆಗಿರುವ ಸಚಿವರಾದ ಪ್ರಿಯಾಂಕ್ ಖರ್ಗೆ, ಬಸವರಾಜ ರಾಯರೆಡ್ಡಿ, ಡಾ.ಶರಣಪ್ರಕಾಶ್ ಪಾಟೀಲ್‌, ಮಧು ಬಂಗಾರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

- Advertisement -

Related news

error: Content is protected !!