




ರಾಷ್ಟ್ರಪತಿಯಾಗುವುದು ದೊಡ್ಡ ಗೌರವ. ಆದರೆ ರಾಷ್ಟ್ರಪತಿಯಂತಹ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ವ್ಯಕ್ತಿಯೊಬ್ಬರು ತಮ್ಮ ಬದುಕಿನ ಅತ್ಯಂತ ದೊಡ್ಡ ಗುರುತಾಗಿ ‘ಶಿಕ್ಷಕ’ನನ್ನೇ ಉಳಿಸಿಕೊಂಡರೆ? ಹೌದು… ಅದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬದುಕಿನ ವೈಶಿಷ್ಟ್ಯ.
ತತ್ವಜ್ಞಾನಿ, ಶಿಕ್ಷಣತಜ್ಞ, ಉಪರಾಷ್ಟ್ರಪತಿ, ರಾಷ್ಟ್ರಪತಿ… ಹೀಗೆ ಅವರ ಬದುಕಿನಲ್ಲಿ ಹಲವು ದೊಡ್ಡ ಹುದ್ದೆಗಳು ಬಂದವು. ಆದರೆ ಶಿಕ್ಷಕನ ಸ್ಥಾನ ಮಾತ್ರ ಅವರ ಬದುಕಿನಿಂದ ಎಂದಿಗೂ ದೂರವಾಗಲಿಲ್ಲ. ಅವರ ಜನ್ಮದಿನವಾದ ಸೆಪ್ಟೆಂಬರ್ 5ನ್ನು ನಾವು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ. ಆದರೆ ಈ ದಿನ ಕೇವಲ ಶಿಕ್ಷಕರಿಗೆ ಶುಭಾಶಯ ಹೇಳುವ ದಿನವಾಗದೆ, ಶಿಕ್ಷಕ ಎಂದರೆ ಯಾರು? ಶಿಕ್ಷಣದ ನಿಜವಾದ ಅರ್ಥವೇನು? ಎಂದು ನಮ್ಮನ್ನು ನಾವೇ ಕೇಳಿಕೊಳ್ಳುವ ದಿನವೂ ಆಗಬೇಕಲ್ಲವೇ?
ಮಗುವೊಂದು ಶಾಲೆಗೆ ಕಾಲಿಡುವಾಗ ಅದರ ಕೈಯಲ್ಲಿ ಪುಸ್ತಕವಿರುತ್ತದೆ. ಆದರೆ ಅದರ ಮನಸ್ಸು ಇನ್ನೂ ಖಾಲಿ ಹಾಳೆಯಂತಿರುತ್ತದೆ. ಅದು ನೋಡುವುದನ್ನು, ಕೇಳುವುದನ್ನು, ಅನುಭವಿಸುವುದನ್ನು ನಿಧಾನವಾಗಿ ತನ್ನೊಳಗೆ ದಾಖಲಿಸಿಕೊಳ್ಳುತ್ತಾ ಹೋಗುತ್ತದೆ. ಹೀಗಾಗಿ ಮಗುವಿನ ಮುಂದೆ ನಿಂತಿರುವ ಶಿಕ್ಷಕ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ. ಆತ ಅದರ ಯೋಚನೆಗಳನ್ನೂ, ನಡೆವಳಿಕೆಯನ್ನೂ, ಕೆಲವೊಮ್ಮೆ ಅದರ ಬದುಕಿನ ದಿಕ್ಕನ್ನೂ ಪ್ರಭಾವಿಸುವ ವ್ಯಕ್ತಿ.
ಮಗುವಿನ ಮನಸ್ಸು ಒದ್ದೆಯಾದ ಮಣ್ಣಿನಂತೆ. ಅದರ ಮೇಲೆ ಮೂಡುವ ಗುರುತುಗಳು ಬಹುಕಾಲ ಉಳಿಯುತ್ತವೆ. ಶಿಕ್ಷಕನ ಒಂದು ಮಾತು ಮಗುವಿನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬಹುದು. ಅದೇ ಒಂದು ನಿರ್ಲಕ್ಷ್ಯದ ಮಾತು ಭರವಸೆಯನ್ನು ಕುಗ್ಗಿಸಬಹುದು. ಹಾಗಾಗಿ ಶಿಕ್ಷಕನ ಹೊಣೆಗಾರಿಕೆ ತರಗತಿಯ ನಾಲ್ಕು ಗೋಡೆಗಳಿಗಿಂತ ಬಹಳ ದೊಡ್ಡದು.
ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಇಷ್ಟು ಮಹತ್ವ ನೀಡಿರುವುದೂ ಇದೇ ಕಾರಣಕ್ಕೆ. ‘ಗುರು’ ಎಂದರೆ ಕೇವಲ ವಿಷಯವನ್ನು ತಿಳಿಸಿಕೊಡುವವನು ಅಲ್ಲ. ತಿಳಿದದ್ದನ್ನು ಬದುಕಿನಲ್ಲಿ ಅರ್ಥಮಾಡಿಕೊಳ್ಳುವಂತೆ ಮಾಡುವವನು. ದಾರಿ ತೋರಿಸುವವನು.
ಕೆಲವೊಮ್ಮೆ ತಪ್ಪಿದಾಗ ತಿದ್ದುವವನು. ಇನ್ನೂ ಕೆಲವೊಮ್ಮೆ ನಾವು ನಮ್ಮನ್ನೇ ನಂಬದಾಗ ನಮ್ಮ ಸಾಮರ್ಥ್ಯವನ್ನು ನಮಗೆ ತೋರಿಸುವವನು.ಆದರೆ ಇಂದು ಶಿಕ್ಷಣದ ಅರ್ಥವನ್ನು ನಾವು ಎಲ್ಲಿ ತಂದು ನಿಲ್ಲಿಸಿದ್ದೇವೆ? ಉತ್ತಮ ಅಂಕಗಳು ಬೇಕು. ಉತ್ತಮ ಕಾಲೇಜು ಬೇಕು. ಒಳ್ಳೆಯ ಉದ್ಯೋಗ ಬೇಕು. ಹೆಚ್ಚು ಸಂಬಳ ಬೇಕು. ಇವೆಲ್ಲವೂ ಬೇಕೇ ಬೇಕು. ಆದರೆ ಇವುಗಳ ನಡುವೆ ಒಳ್ಳೆಯ ಮನುಷ್ಯನಾಗುವುದಕ್ಕೆ ಮಹತ್ವ ಎಲ್ಲಿದೆ?
ಶಿಕ್ಷಣ ಪಡೆದುಕೊಂಡ ವ್ಯಕ್ತಿ ಹೆಚ್ಚು ಹಣ ಸಂಪಾದಿಸಬಹುದು. ಆದರೆ ಆ ಶಿಕ್ಷಣ ಅವನಿಗೆ ಪ್ರಾಮಾಣಿಕತೆಯನ್ನು ಕಲಿಸದಿದ್ದರೆ? ದೊಡ್ಡ ಹುದ್ದೆ ಪಡೆಯಬಹುದು. ಆದರೆ ಅಧಿಕಾರದ ಜೊತೆಗೆ ಹೊಣೆಗಾರಿಕೆಯನ್ನು ಕಲಿಸದಿದ್ದರೆ? ಜ್ಞಾನ ಹೆಚ್ಚಿರಬಹುದು. ಆದರೆ ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವ ಮನಸ್ಸು ಇಲ್ಲದಿದ್ದರೆ? ಆಗ ನಾವು ಶಿಕ್ಷಣದ ಗುರಿಯನ್ನು ಸಾಧಿಸಿದ್ದೇವೆ ಎನ್ನಬಹುದೇ?
ಜಾತಿ, ಅಸಮಾನತೆ, ಅಸ್ಪೃಶ್ಯತೆ, ಭ್ರಷ್ಟಾಚಾರ, ಅಧಿಕಾರದ ದಾಹ, ಹಣದ ಮೇಲಿನ ಅತಿಯಾದ ವ್ಯಾಮೋಹ ಇವೆಲ್ಲವೂ ನಮ್ಮ ಸಮಾಜದಲ್ಲಿರುವ ವಾಸ್ತವಗಳು. ಇವುಗಳ ಬಗ್ಗೆ ಪ್ರಶ್ನಿಸುವ ಮನಸ್ಸನ್ನು ಶಿಕ್ಷಣ ಬೆಳೆಸಬೇಕಲ್ಲವೇ? ಸಮಾನತೆ, ಸಾಮಾಜಿಕ ನ್ಯಾಯ, ಸಂವಿಧಾನದ ಮೌಲ್ಯಗಳು, ಹಕ್ಕು ಮತ್ತು ಕರ್ತವ್ಯಗಳ ಅರಿವು ಮಕ್ಕಳ ಬದುಕಿನ ಭಾಗವಾಗಬೇಕಲ್ಲವೇ? ಏಕೆಂದರೆ, ಶಿಕ್ಷಣ ಎಂದರೆ ಉತ್ತರಗಳನ್ನು ಕಂಠಪಾಠ ಮಾಡಿಸುವುದಲ್ಲ. ಪ್ರಶ್ನೆಗಳನ್ನು ಕೇಳಲು ಕಲಿಸುವುದೂ ಶಿಕ್ಷಣವೇ.
ಇಂದು ಮಾಹಿತಿಯ ಕೊರತೆಯಿಲ್ಲ. ಮೊಬೈಲ್ ತೆರೆದರೆ ಕ್ಷಣಾರ್ಧದಲ್ಲಿ ಸಾವಿರಾರು ಮಾಹಿತಿಗಳು ನಮ್ಮ ಮುಂದೆ ಬರುತ್ತವೆ. ಆದರೆ ಯಾವುದು ಸತ್ಯ? ಯಾವುದು ತಪ್ಪು? ಯಾವುದನ್ನು ನಂಬಬೇಕು? ಯಾವುದನ್ನು ಪ್ರಶ್ನಿಸಬೇಕು? ಎನ್ನುವ ವಿವೇಕವನ್ನು ಯಾರು ಬೆಳೆಸಬೇಕು? ಇಲ್ಲಿಯೇ ಶಿಕ್ಷಕನ ಪಾತ್ರ ಇನ್ನಷ್ಟು ಮಹತ್ವ ಪಡೆಯುತ್ತದೆ.
ಮಕ್ಕಳನ್ನು ಕೇವಲ ಕಲಿಯುವವರು, ಶಿಕ್ಷಕರನ್ನು ಕೇವಲ ಕಲಿಸುವವರು ಎಂದು ನೋಡುವುದೂ ಈಗ ಬದಲಾಗಬೇಕಿದೆ. ಒಂದು ಮಗು ಕೇಳುವ ಪ್ರಶ್ನೆಯಿಂದ ಶಿಕ್ಷಕನೂ ಕಲಿಯಬಹುದು. ಮಕ್ಕಳ ಕುತೂಹಲಕ್ಕೆ ಅವಕಾಶ ನೀಡಿದಾಗ ತರಗತಿ ಕೇವಲ ಪಾಠದ ಸ್ಥಳವಾಗಿರುವುದಿಲ್ಲ; ಅದು ಸಂವಾದದ ಸ್ಥಳವಾಗುತ್ತದೆ.
ಭಾಷೆಯನ್ನೇ ತೆಗೆದುಕೊಂಡರೆ ಮಗು ಮೊದಲು ಬರೆಯುವುದರಿಂದ ಭಾಷೆ ಕಲಿಯುವುದಿಲ್ಲ. ಅದು ಕೇಳುತ್ತದೆ. ಮಾತನಾಡುತ್ತದೆ. ಕಥೆಯನ್ನು ಕೇಳುತ್ತದೆ. ಅನುಕರಿಸುತ್ತದೆ. ಸಂಭಾಷಣೆಯ ಮೂಲಕ ಭಾಷೆಯನ್ನು ತನ್ನದಾಗಿಸಿಕೊಳ್ಳುತ್ತದೆ. ಹಾಗೆಯೇ ಬದುಕಿನ ಅನೇಕ ದೊಡ್ಡ ಪಾಠಗಳನ್ನೂ ಪುಸ್ತಕಕ್ಕಿಂತ ಮನುಷ್ಯರಿಂದಲೇ ಕಲಿಯುತ್ತೇವೆ.
ಒಬ್ಬ ಶಿಕ್ಷಕ ಸಮಯಕ್ಕೆ ಸರಿಯಾಗಿ ಬರುವುದನ್ನು ಅಭ್ಯಾಸ ಮಾಡಿಕೊಂಡಿದ್ದರೆ, ಅದು ವಿದ್ಯಾರ್ಥಿಗೆ ಸಮಯಪಾಲನೆಯ ಪಾಠ. ಆತ ಎಲ್ಲ ಮಕ್ಕಳನ್ನೂ ಸಮಾನವಾಗಿ ನೋಡಿದರೆ, ಅದು ಸಮಾನತೆಯ ಪಾಠ. ತಪ್ಪನ್ನು ಒಪ್ಪಿಕೊಂಡರೆ, ಅದು ಪ್ರಾಮಾಣಿಕತೆಯ ಪಾಠ. ವಿದ್ಯಾರ್ಥಿಯ ಮಾತನ್ನು ತಾಳ್ಮೆಯಿಂದ ಕೇಳಿದರೆ, ಅದು ಗೌರವದ ಪಾಠ. ಹೀಗೆ ಶಿಕ್ಷಕ ಹೇಳುವುದಕ್ಕಿಂತ ಆತ ಬದುಕಿ ತೋರಿಸುವುದೇ ಕೆಲವೊಮ್ಮೆ ದೊಡ್ಡ ಪಾಠವಾಗುತ್ತದೆ.
ಹೀಗಾಗಿ ಶಾಲೆ ಮಕ್ಕಳನ್ನು ಒಂದೇ ಅಳತೆಯಲ್ಲಿ ಅಳೆಯುವ ಸ್ಥಳವಾಗಬಾರದು. ಪ್ರತಿಯೊಂದು ಮಗುವಿಗೂ ತನ್ನದೇ ವೇಗವಿದೆ. ತನ್ನದೇ ಆಸಕ್ತಿಯಿದೆ. ತನ್ನದೇ ಸಾಮರ್ಥ್ಯವಿದೆ. ಶಿಕ್ಷಣದ ಕೆಲಸ ಎಲ್ಲ ಮಕ್ಕಳನ್ನೂ ಒಂದೇ ಮಾದರಿಯಲ್ಲಿ ರೂಪಿಸುವುದಲ್ಲ; ಅವರೊಳಗಿನ ಸಾಧ್ಯತೆಗಳನ್ನು ಗುರುತಿಸಿ ಅವು ಬೆಳೆಯಲು ಅವಕಾಶವನ್ನು ಮಾಡಿಕೊಡುವುದು. ಅಂಕಗಳು ಬೇಕು. ಸ್ಪರ್ಧೆಯೂ ಇರಲಿ. ಆದರೆ ಕಲಿಯುವ ಸಂತೋಷ ಕಳೆದುಹೋಗಬಾರದು. ಮಗುವಿನ ಕುತೂಹಲ ಅಂಕಪಟ್ಟಿಯ ಕೆಳಗೆ ಹೂತುಹೋಗಬಾರದು. ಓದು ಕೇವಲ ಪರೀಕ್ಷೆ ಮುಗಿಸುವ ಸಾಧನವಾಗದೆ, ಬದುಕನ್ನು ಅರ್ಥಮಾಡಿಕೊಳ್ಳುವ ಪ್ರಯಾಣವಾಗಬೇಕು.
ಶಿಕ್ಷಕರ ದಿನದಂದು ಹೂಗುಚ್ಛ ಕೊಡುವುದು, ಶುಭಾಷಯ ಕೋರುವುದು ಸಂಭ್ರಮ. ಆದರೆ ಅದಕ್ಕಿಂತ ದೊಡ್ಡ ಗೌರವವೆಂದರೆ ಒಬ್ಬ ಶಿಕ್ಷಕ ಬಿತ್ತಿದ ಒಳ್ಳೆಯ ವಿಚಾರವನ್ನು ವಿದ್ಯಾರ್ಥಿ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಬದುಕಿನಲ್ಲಿ ಹುದ್ದೆಗಳು ಬದಲಾಗಬಹುದು. ಅಧಿಕಾರಗಳು ಬದಲಾಗಬಹುದು. ಕಾಲವೂ ಬದಲಾಗಬಹುದು. ಆದರೆ ಒಬ್ಬ ಶಿಕ್ಷಕ ಮನಸ್ಸಿನೊಳಗೆ ಬಿತ್ತಿದ ಕಲಿಕೆ, ಮೌಲ್ಯ ಮತ್ತು ಆತ್ಮವಿಶ್ವಾಸ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಲೇ ಇರುತ್ತದೆ. ಆದ್ದರಿಂದ ಶಿಕ್ಷಕರ ದಿನವೆಂದರೆ ಕೇವಲ ಶಿಕ್ಷಕರನ್ನು ಅಭಿನಂದಿಸುವ ದಿನವಲ್ಲ. ಶಿಕ್ಷಣವನ್ನು ಮತ್ತೆ ಮನುಷ್ಯನ ಬದುಕಿನೊಂದಿಗೆ ಜೋಡಿಸಿಕೊಳ್ಳುವ ದಿನ. ಶಿಕ್ಷಕನ ಹೊಣೆಗಾರಿಕೆಯನ್ನು ನೆನಪಿಸಿಕೊಳ್ಳುವ ದಿನ ಮತ್ತು ನಮ್ಮೊಳಗೆ ಒಮ್ಮೆ ಬೆಳಕು ಹಚ್ಚಿದ ಆ ಗುರುವನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುವ ದಿನ.
✍ಡಾ. ಮೈತ್ರಿ ಭಟ್, ವಿಟ್ಲ








