ಒಂದೇ ದಿನದಲ್ಲಿ 550 ಕ್ಕಿಂತಲೂ ಹೆಚ್ಚು ಕೇಸ್ ವಿಚಾರಣೆ ಮಾಡಿ ದಾಖಲೆ ನಿರ್ಮಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ






ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಶ್ಚರ್ಯಕರ ಸಂಗತಿಯೊಂದು ವೈರಲ್ ಆಗಿದೆ. ಇಂದು ನ್ಯಾಯದ ತಕ್ಕಡಿ ಹಿಡಿದಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಸುಮಾರು 27 ವರ್ಷಗಳ ಹಿಂದೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು.
1998ರಲ್ಲಿ ಬಿಡುಗಡೆಯಾದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಹೂ ಮಳೆ’ ಚಿತ್ರದಲ್ಲಿ ನಾಗಪ್ರಸನ್ನ ಅವರು ನಟಿಸಿದ್ದರು. ಈ ಚಿತ್ರದಲ್ಲಿ ರಮೇಶ್ ಅರವಿಂದ್ ನಾಯಕನಾಗಿ ಕಾಣಿಸಿಕೊಂಡಿದ್ದು, ನಾಗಪ್ರಸನ್ನ ಅವರು ನಾಯಕನ ತಂಗಿಯ ಪ್ರಿಯಕರನ ಪಾತ್ರ ನಿರ್ವಹಿಸಿದ್ದರು. ಆ ಸಮಯದಲ್ಲಿ ಅವರು ವಕೀಲ ವೃತ್ತಿಯಲ್ಲಿದ್ದರು.
ಸಿನಿಮಾ ಕ್ಷೇತ್ರದಿಂದ ಹೊರಬಂದ ನಾಗಪ್ರಸನ್ನ ಅವರು ನಂತರ ಸಂಪೂರ್ಣವಾಗಿ ನ್ಯಾಯಾಂಗ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ಇಂದು ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ತಮ್ಮ ವಿಶಿಷ್ಟ ಕಾರ್ಯಶೈಲಿಯಿಂದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಒಂದೇ ದಿನ 550ಕ್ಕೂ ಹೆಚ್ಚು ಪ್ರಕರಣಗಳನ್ನು ವಿಚಾರಣೆ ನಡೆಸಿ ದಾಖಲೆ ನಿರ್ಮಿಸಿದ್ದು, ಚರ್ಚೆಗೆ ಕಾರಣವಾಗಿತ್ತು.
ಕ್ಯಾಮೆರಾ ಮುಂದೆ ನಟಿಸಿದ್ದ ವ್ಯಕ್ತಿ ಇಂದು ಘನ ನ್ಯಾಯಾಲಯದಲ್ಲಿ ನ್ಯಾಯದ ತಕ್ಕಡಿ ಹಿಡಿದಿರುವುದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದರೂ, ಇಂದು ಕರ್ನಾಟಕದ ಏಕ ಸದಸ್ಯ ನ್ಯಾಯ ಪೀಠದಲ್ಲಿ ಕುಳಿತು ಉತ್ತಮ ಪ್ರಾಮಾಣಿಕ ನ್ಯಾಯ ನೀಡಿ ಎಲ್ಲರ ಗಮನ ಸೆಳೆದಿರುವುದು ನಮ್ಮ ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆತಂದಿದೆ.








